Tuesday, February 8, 2011


ಪುಟ್ಟಬಾಲೆಯ ದೊಡ್ಡ ಗಂಟಲು


ಆ ಪುಟ್ಟ ಬಾಲೆ ಮಾಲ್ಡೋವಾ ದೇಶದ ಸಣ್ಣ ಹಳ್ಳಿಯಿಂದ ಬಂದವಳು. ವಯಸ್ಸು ಕೇವಲ ಎಂಟು ವರ್ಷ. ಆದರೆ ಅವಳು ಬಾಯಿಬಿಟ್ಟರೆ ಸಾಕು ಇಡೀ ಜಗತ್ತು ಮಂಕಾಗುತ್ತದೆ. ಮೈಕಿನ ಮುಂದೆ ಹಾಡಲು ಆರಂಭಿಸಿದರೆ ಸತತ ಮೂರುಗಂಟೆಗಳ ಕಾಲ ಲಕ್ಷಾಂತರ ಮಂದಿಯನ್ನು ಸಂಗೀತದ ಅಲೆಯಲ್ಲಿ ತೇಲಿಸುತ್ತಾಳೆ. ಗಂಟಲಿನಲ್ಲಿ ಮಷೀನು ಇಟ್ಟುಕೊಂಡಿದ್ದಾಳೇನೋ ಎಂಬಂತೆ ಅವಳ ಪುಟ್ಟ ಬಾಲಕಿಯ ಬಾಯಿಂದ ಇಂಪಾದ ಧ್ವನಿ ಹೊರಹೊಮ್ಮುತ್ತದೆ.
ಅವಳ ಹೆಸರು ಕ್ಲಿಯೋಪಾತ್ರ ಸ್ಟ್ರಾಟನ್. ಎಲ್ಲರೂ ಅವಳನ್ನು ಪ್ರೀತಿಯಿಂದ ಕ್ಲಿಯೋ ಎಂತಲೇ ಕರೆಯುತ್ತಾರೆ. ಪಾಶ್ಚಾತ್ಯ ಸಂಗೀತ ಇಷ್ಟಪಡುವ ಪ್ರತಿಯೊಬ್ಬರ ಬಳಿಯೂ ಕ್ಲಿಯೋ ಹಾಡಿದ ಅಮೂಲ್ಯ ಆಲ್ಬಮ್ಅನ್ನು ಇರುತ್ತದೆ. ಕೇವಲ ಆರನೇ ವಯಸ್ಸಿಗೆ ನಾಲ್ಕು ಆಲ್ಬಮ್ ಬಿಡುಗಡೆ ಮಾಡಿದ ಕೀರ್ತಿ ಅವಳ ಮೇಲಿದೆ. ಈಗ ಅವಳ ಆಲ್ಬಮ್ಗಳು ಸಂಖ್ಯೆ 20ಕ್ಕೆ ಏರಿವೆ. ಜಗತ್ತಿನ ಎಲ್ಲಾ ಹಾಡುಗಾರರನ್ನು ಅವಳು ಅನುಕರಣೆ ಮಾಡಬಲ್ಲಳು. ಚಿಕ್ಕವಳಾದರೂ ದೊಡ್ಡವರಂತೆ ಹಾಡಬಲ್ಲಳು. ಅವಳ ತಂದೆ ಒಂದು ಸೌಂಡ್ ರೆಕಾರ್ಡಿಂಗ್ ಸ್ಟುಡಿಯೋವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಒಮ್ಮೆ ಮೈಕ್ರೋಪೋನ್ ಕಿವಿಗಿಟ್ಟುಕೊಂಡು ಆಟಕ್ಕಾಗಿ ಹಾಡುತ್ತಿದ್ದಳು. ಅವಳ ಪ್ರತಿಭೆಯನ್ನು ಗುರುತಿಸಿ ನೀರೆರೆದಾಗ ಅದು ಈಗ ಬಹುದೊಡ್ಡ ಮರವಾಗಿ ಬೆಳೆದು ನಿಂತಿದೆ.



ಸಖತ್ ಹಾಟ್ ಮಗಾ

ಮೂಗು ಮಚ್ಚಿಕೊಂಡು ಗುಂಡು ಹಾಕುವವರನ್ನು ನೋಡಿದ್ದೀರಿ. ಆದರೆ ಕಣ್ಣು , ಕಿವಿ, ಮೂಗು ಮುಚ್ಚಿಕೊಂಡು ಮೆಣಸಿನ ಕಾಯಿ ತಿನ್ನುವವರನ್ನು ನೀವು ಕಂಡಿದ್ದೀರಾ? ಗುಂಡು ಹಾಕಿದರೆ ಕಿಕ್ ಹೊಡೆಯುತ್ತೆ ಬಿಡಿ, ಆದರೆ ಮೆಣಸಿನ ಕಾಯಿ ತಿಂದರೆ ಕಣ್ಣು, ಕಿವಿ, ಮೂಗು ಎಲ್ಲಾ ಒಂದಾಗಿ ಕೆನ್ನೆ ಕೆಂಪೇರುತ್ತದೆ!
ಅಷ್ಟಕ್ಕೂ ಅದು ನಿಮ್ಮ ಮನೆಯ ಹಿತ್ತಲಲ್ಲಿ ಸಿಗುವ ನಾಟಿ ಮೆಣಸಿನ ಕಾಯಿಯಲ್ಲ. ಅದು ವಿಶ್ವದ ಅತೀ ಹೆಚ್ಚು ಹಾಟ್ ಮೆಣಸಿನ ಕಾಯಿ. ಆ ಮೆಣಸಿನಕಾಯಿ ಹೆಸರು ‘ಭೂತ್ ಚಿಲ್ಲಿ’. ಬ್ಯಾಡಗಿ ಮೆಣಸಿನ ಕಾಯಿ ಬಗ್ಗೆ ಗೊತ್ತು, ಜವಾರಿ ಮೆಣಸಿನ ಕಾಯಿ ಗೊತ್ತು. ಇದ್ಯಾವ ಸೀಮೆ ಭೂತ್ ಚಿಲ್ಲಿ ? ಇದರ ಪೂರಾ ಹೆಸರು ‘ಭೂತ್ ಜುಲಾಕಿಯಾ’. ಇದು ದಕ್ಷಿಣ ಆಫ್ರಿಕಾದಲ್ಲಿ ಸಿಗುವ ವೈದ್ಯಕೀಯ ಗುಣವಿರುವ ಮೆಣಸಿನಕಾಯಿ. ಈ ಮೆಣಸಿನಕಾಯಿ ಬಗ್ಗೆ ತಿಳಿದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ಅದನ್ನು ತಿಂದು ತೋರಿಸಿ ಅಂದರೆ? ಹೌದು, ಈ ಭೂತ್ ಚಿಲ್ಲಿಯನ್ನು ತಿನ್ನುವ ಒಬ್ಬ ಮಹಿಳೆ ಅಸ್ಸಾಮಿನಲ್ಲಿದ್ದಾಳೆ. ಅವಳು ತಿಂದದ್ದು ಒಂದಲ್ಲ, ಎರಡಲ್ಲ. ಬರೋಬ್ಬರಿ 51 . ಕೇವಲ ಎರಡು ನಿಮಿಷದಲ್ಲಿ 51 ಮೆಣಸಿನ ಕಾಯಿ ತಿಂದು ವಿಶ್ವ ದಾಖಲೆ ನಿರ್ಮಿಸಿದ್ದಾಳೆ.
ಅವಳ ಹೆಸರು ಅನಾದಿತಾ ದತ್ತಾ. 30 ವರ್ಷ ವಯಸ್ಸು. 2002ರಲ್ಲಿ ಸೌತ್ ಆಫ್ರಿಕಾದ ಒಬ್ಬ ಹುಡುಗ ಎಂಟು ಮೆಣಸಿನ ಕಾಯಿ ತಿಂದು ದಾಖಲೆ ನಿರ್ಮಿಸಿದ್ದ. ಈ ದಾಖಲೆಯನ್ನು ಅನಾದಿತ ಎರಡು ನಿಮಿಷದಲ್ಲಿ 51 ಮೆಣಸಿನ ಕಾಯಿಗಳನ್ನು ತಿಂದು ಮುರಿದಿದ್ದಾರೆ. ಈ ಸ್ಪರ್ಧೆ ನಡೆದದ್ದು ಇಂಗ್ಲೆಂಡಿನಲ್ಲಿ. ಅನಾದಿತಾ ಮೆಣಸಿನ ಕಾಯಿಗಳನ್ನು ತಿನ್ನುವುದನ್ನು ‘ಚಾನೆಲ್4’ನಲ್ಲಿ ನೇರ ಪ್ರಸಾರ ನೋಡಿದ ಇಂಗ್ಲಿಷ್ ಜನ ದಂಗುಬಡಿದು ಹೋದರು.
ಅನಾದಿತಾಳ ನಾಲಗೆ ಗಡಸು ನಾಲಗೆ. ಅವಳು ಚಿಕ್ಕವಳಿದ್ದಾಗ ಆರು ವರ್ಷ ವಯಸ್ಸಿನ ತನಕ ಮಾತನಾಡಲೇ ಇಲ್ಲ. ಇದರಿಂದ ಬೆದರಿಂದ ಆಕೆಯ ಅಮ್ಮ ಅನಾದಿತಾಳ ನಾಲಗೆಗೆ ಮೆಣಸಿನ ಪುಡಿಯನ್ನು ಹಾಕಿ ತಿಕ್ಕುತ್ತಿದ್ದಂತೆ. ಹಾಗಾಗಿ ಅವಳ ನಾಲಗೆಗೆ ಖಾರ ಕಾಯಂ ಆಗಿ ಹೋಯಿತು. ಅವಳ ವೈಫಲ್ಯವೇ ದಾಖಲೆಯಾಗಿ ಮೂಡಿಬಂತು. ‘ನಮ್ಮಲ್ಲಿ ರುವ ಪೈಫಲ್ಯತೆನ್ನೇ ನಾವು ಆಯುಧ ಮಾಡಿಕೊಂಡು ಮುನ್ನಡೆಯಬೇಕು’ ಎಂದು ದೊಡ್ಡವರು ಹೇಳುವುದು ಇದನ್ನೇ ಅಲ್ಲವೆ?

ಡಾನ್ಸ್ ಇಂಡಿಯಾ ಡಾನ್ಸ್



ಡಾನ್ಸ್ ಇಂಡಿಯಾ ಡಾನ್ಸ್


ಅವನು ವೇದಿಕೆಯ ಮೇಲೆ ಹೆಜ್ಜೆ ಇಟ್ಟರೆ ನೋಡುಗನ ಹೃದಯ ಹಿಡಿಯಾಗುತ್ತದೆ. ಅವನು ಅಲ್ಲಿ ಅಲುಗಿದರೆ ಸಾಕು, ಇಲ್ಲಿ ಉಸಿರು ಕಟ್ಟಿಕೊಂಡು ಕಣ್ಣುಗಳು ಕೆಂಪೇರುಸತ್ತವೆ. ಅವನು ತನ್ನ ಪುಟ್ಟ ದೇಹವನ್ನು ರಂಗದ ಮೇಲೆ ತೆರದುಕೊಂಡಾಗ ಸಭಾಂಗಣವಿಡೀ ಶಾಂತಿ ಮಂತ್ರ. ಮೇಲಿಂದ ಸಣ್ಣಗೆ ಸುಳಿಯುವ ಬಣ್ಣದ ಬೆಳಕಿಗೆ ಅವನು ಜೋಡಿಯಾದಾಗ ಅಲ್ಲಿ ಓಕುಳಿಯಾಟ. ಅವನು ಸುತ್ತಲೂ ಸುತ್ತಿಕೊಳ್ಳುತ್ತಿರುವ ಹಾಡಿನ ಅಬ್ಬರವನ್ನು ಮೀಟಿ ಮೇಲೇಳುತ್ತಾನೆ.ನಿ ಧಾನವಾಗಿ ಆರಂಭವಾಗುವ ಅವನ ಆಟ ಹೋಗುತ್ತಾ ಹೋಗುತ್ತಾ ದೊಡ್ಡಾಟವಾಗುತ್ತದೆ........!
ಒಮ್ಮೆ ಸಮರ ಕಲೆ. ಇನ್ನೊಮ್ಮೆ ಥಾ ದಿಮಿ ಥಾ. ಒಮ್ಮೆಮ್ಮೆ ಕುಚುಪುಡಿ ಕಿಚಡಿ, ಅಲ್ಲಲ್ಲಿ ಬ್ಯಾಲೆಯ ಬೊಂಬಾಟ್. ಒಂದಷ್ಟು ಬ್ರೇಕ್ ಬ್ಯಾಕಪ್, ಅಷ್ಟಿಷ್ಟು ರಾಕ್.......ಈ ಕುಣಿತಗಳ ನಡುವೆ ಕಳೆದು ಹೋಗುತ್ತಾನೆ. ಕಣಿಯುತ್ತಾ ಕುಣಿಯುತ್ತಾ ಕಣ್ಣಲ್ಲಿ ಅದ್ಭುತ ಶಕ್ತಿ ತೋರುತ್ತಾರೆ. ಅವನಿಗೆ ಸುಸ್ತಾಗುವುದಿಲ್ಲ, ನೋಡುವವರನ್ನು ಸುಸ್ತು ಹೊಡೆಸುತ್ತಾನೆ. ಅವನೊಬ್ಬ ಮಾತ್ರ ಕುಣಿಯುವುದಿಲ್ಲ, ನೋಡುವವರನ್ನೂ ಕುಣಿಸುತ್ತಾನೆ. ಕಡೆಗೆ ‘ಡಾನ್ಸ್ ಇಂಡಿಯಾ ಡಾನ್ಸ್’ ಅನ್ನುತ್ತಾನೆ!
ಅವನ ಹೆಸರು ಕಮಲೇಶ್ ಪಟೇಲ್. ಅವನಿಗೆ ಎರಡು ಕಾಲಿಲ್ಲ. ಅವನ ಕುಣಿತಕ್ಕೆ ಕಾಲು ಬೇಕಾಗೇ ಇಲ್ಲ. ಅವನು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುವುದಿಲ್ಲ, ಮನಸ್ಸಿನ ಲಜ್ಜೆ ಬಿಟ್ಟು ಕುಣಿಯುತ್ತಾನೆ.
ಕಮಲೇಶ್ ಬರೋಡಾದ ಹೆಮ್ಮೆ. ಅವನು ಹುಟ್ಟು ಅಂಗವಿಕಲನಲ್ಲ. ಯಾವನೋ ವೈದ್ಯ ಮಾಡಿದ ತಪ್ಪಿಗೆ ಅವನ ಎರಡೂ ಕಾಲು ಕಳೆದುಕೊಂಡ. ಅಲ್ಲಿಗೆ ಕಮಲೇಶ್ ಕನಸು ಕಾಣುವುದನ್ನು ನಿಲ್ಲಿಸಲಿಲ್ಲ. ಮನಸ್ಸನ್ನೇ ಕಾಲು ಮಾಡಿಕೊಂಡ. ಐದನೇ ವಯಸ್ಸಿನಿಂದ ಕುಣಿಯಲು ಆರಂಭಿಸಿದ ಕಮಲೇಶನ ಹೃದಯ ಕುಣಿಯುತ್ತಲೇ ಇದೆ. ಒಂದೂವರೆ ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿರುವ ಅವನು ಹಲವು ದಾಖಲೆ ನಿರ್ಮಾಣ ಮಾಡಿದ್ದಾನೆ.
ಅವನ ಸೂಪರ್ ಡಾನ್ಸ್ ಸಾಗರದಾಚೆಗೂ ಸಾಗಿದೆ. ಟಿವಿ ಚಾನೆಲ್ವೊಂದರ ರಿಯಾಲಿಟಿ ಶೋ ‘ಡಾನ್ಸ್ ಇಂಡಿಯಾ ಡಾನ್ಸ್’ ನಲ್ಲಿ ಇಡೀ ದೇಶವನ್ನು ಬೆರಗು ಮಾಡಿಡಿ ‘ಸ್ಟಾರ್’ ಪಟ್ಟ ಕಟ್ಟಿಕೊಂಡಿದ್ದಾನೆ. ಕಮಲೇಶ್ ಚಿಕ್ಕವನಿರುವಾಗ ವೈದ್ಯನೊಬ್ಬ ಕೊಟ್ಟ ಇಂಜೆಕ್ಷನ್ ಅವನ ಬದುಕನ್ನೇ ಬದಲಾಯಿಸಿತು. ಚುಚ್ಚುಮದ್ದು ಕೊಟ್ಟ ದಿನದಿಂದ ಬಿದ್ದು ಹೋದ ಅವನ ಕಾಲುಗಳು ಮತ್ತೆಂದೂ ಮೇಲೇಳಲೇ ಇಲ್ಲ. ಅವನು ತಂದೆ ತಾಯಿ ಮಗನ ಕಾಲಿಗಾಗಿ ಇಡೀ ದೇಶದ ಆಸ್ಪತ್ರೆಗಳನ್ನು ಸುತ್ತಿದ್ದಾರೆ. ಆದರೆ ಕಾಲು ಬರಲಿಲ್ಲ. ಕಾಮರ್ಸ್ನಲ್ಲಿ ಡಿಗ್ರಿ ಕಂಪ್ಲೀಟ್ ಮಾಡಿರುವ ಕಮಲೇಶ್, ಕಾಲಿನ ಮೇಲಿನ ಆಸೆ ಬಿಟ್ಟು ಬಹುದೊಡ್ಡ ಡಾನ್ಸರ್ ಆಗುವ ಕನಸಿನ ಜೊತೆ ಕಾಲ ಕಳೆಯುತ್ತಿದ್ದಾನೆ.

ಅಂಧರ ಬಾಳಿನ ಬೆಳಕು



ಮುಂಬೈ ಮಹಾನಗರದ ಬಾಂದ್ರಾ ರೈಲು ನಿಲ್ದಾಣ ಪ್ರತಿ ಬೋಗಿಗಳಿಗೂ ರಾಜೀಂದರ್ ಸಿಂಗ್ ಗೊತ್ತು. ಮುಂಜಾನೆ ಒಂಬತ್ತು ಗಂಟೆಯಲ್ಲಿ ಅಲ್ಲೊಂದು ಮಿಂಚಿನ ಸಂಚಾರ. ಕಣ್ಣಿಗೆ ಕಪ್ಪನೆಯ ಕನ್ನಡಕ. ಕೈಯ್ಯಲ್ಲೊಂದು ವಾಕಿಂಗ್ ಸ್ಟಿಕ್. ಸದಾ ನಗುಮುಖದ ರಾಜೀಂದರ್ಗೆ ಒಂದೇ ಒಂದು ಸ್ಪರ್ಷ ಸಾಕು, ಅವರು ಯಾರೆಂದು ಹೇಳಲಿಕ್ಕೆ.
ಅವರಿಗೆ ಎರಡು ಕಣ್ಣುಗಳು ಕಾಣಿಸುವುದಿಲ್ಲ. ಎರಡು ಕಿವಿಗಳು ಕೇಳಿಸುವುದಿಲ್ಲ. ಅವರನ್ನು ಕಂಡವರು ಅವರನ್ನು ಸ್ಪರ್ಷಿಸಿದರೆ ಸಾಕು.....ಅರೇ ಭೈ ಕೈಸೇ ಹೋ......ಎಂದು ನಗುತ್ತಾ ಮಾತನಾಡಿಸುತ್ತಾರೆ. ನಮ್ಮಾಳಗಿರುವ ಕೋಟಿ ಕೋಟಿ ಅಂಧರ ನಡುವೆ ಅವರೂ ಒಬ್ಬ. ಆದರೆ ಅವರು ಕೋಟಿಗೊಬ್ಬ. ಜಗತ್ತಿನಾದ್ಯಂತ ಇರುವ ಅಂಧರ ಬಾಳಿನ ಬೆಳಕು ಅವರು. ಅಂಧರಿಗೆ ಬೆಳಕಾಗಿರುವ ಬ್ರೈಲ್ ಲಿಪಿಗೆ ಹೊಸ ಭಾಷ್ಯ ಬರೆದವರೇ ರಾಜೀಂದರ್ ಸಿಂಗ್.
58 ವರ್ಷ ವಯಸ್ಸು. ಮುಂಬೈನ ‘ಅಸೋಸಿಯೇಷನ್ ಆಪ್ ಬ್ಲೈಂಡ್’ (ಎನ್ಎಬಿ) ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದ ಇವರು ಈಗ ಅದೇ ಸಂಸ್ಥೆಗೆ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲ ಬ್ರೈಲ್ ಲಿಪಿಯ ಬಗ್ಗೆ ಅವರ ಸಂಶೋಧನೆ ಪ್ರತಿನಿತ್ಯ ಸಾಗುತ್ತಿದೆ. ಬ್ರೈಲ್ ಲಿಪಿ ವಿದೇಶಿ ಸಂಶೋಧನೆಯಾದರೂ ಅದಕ್ಕೊಂದು ಸ್ಪಷ್ಟ ರೂಪ ಕೊಟ್ಟವರು ರಾಜೀಂದರ್ ಸಿಂಗ್. ಬ್ರೈಲ್ ಲಿಪಿಯ ಬಗ್ಗೆ ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಅಲ್ಲಿ ರಾಜೀಂದರ್ ಸಿಂಗ್ ಇರುತ್ತಾರೆ. ಬ್ರೈಲ್ ಬಗ್ಗೆ ವಿಶ್ವದಾದ್ಯಂತ ಸಾವಿರಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಟುವರ್ಡ್ಸ್ ಲೈಟ್‘ ಬ್ರೈಲ್ ಮ್ಯಾಗಜಿನ್ಗೆ ಸಂಪಾದಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ‘ಮಟಿಲ್ಡಾ’ ಎನ್ನುವ ಅಂತಾರಾಷ್ಟ್ರೀಯ ಮ್ಯಾಗಜಿನ್ಗೂ ರಾಜಿಂದರ್ ಸಂಪಾದಕರು. ರಾಜೀಂದರ್ ಸಾಧನೆಗೆ ಹಲವು ಗೌರವ ಮನ್ನಣೆಗಳು ಅವರನ್ನು ಹುಡುಕಿಕೊಂಡು ಬಂದಿವೆ. ಎರಡು ಡಾಕ್ಟರೇಟ್ಗಳು. ಅವರ ಮುಡಿಯಲ್ಲಿವೆ. ‘ಅಂದರ ಡಾಕ್ಟರ್’ ಸೇರಿದಂತೆ ನೂರಾರು ಬಿರುದುಗಳು ಅವರ ಹೆಸರಿನಲ್ಲಿವೆ. ರಾಜೀಂದರ್ ಅವರ ಪ್ರಮುಖ ಸಾಧನೆಯೆಂದರೆ ಪ್ರತೀವರ್ಷ ಮುಂಬೈನಲ್ಲಿ ಏರ್ಪಡಿಸುವ ‘ಹಾರ್ಮೊನಿ’ ಅಂಧರ ಮ್ಯಾರಥಾನ್. ಈ ಭಾವೈಕ್ಯ ಓಟದಲ್ಲಿ ಹಲವು ದೇಶಗಳ ಅಂಧ ಮ್ಯಾರಥಾನ್ ಪಟುಗಳು ಪಾಲ್ಗೊಳ್ಳುತ್ತಾರೆ.
ರಾಜಿಂದರ್ ಹುಟ್ಟಿದ್ದು ಪಾಕಿಸ್ಥಾನದ ಪೆಷಾವರ್. ಭಾರತ- ಪಾಕಿಸ್ಥಾನ ನಡುವೆ ಇಬ್ಬಾಗವಾದಾಗ ರಾಜೀಂದರ್ ಕುಟುಂಬ ಭಾರತ ಸೇರಿಕೊಂಡಿತು. ಪಾಕಿಸ್ಥಾನ ಬಿಟ್ಟ ಮೇಲೆ ಅವರು ಪಾಕ್ನ ಸಂಬಂಧವನ್ನು ಕಡಿದುಕೊಳ್ಳಲಿಲ್ಲ. ಅಲ್ಲಿಯೂ ರಾಜಿಂದರ್ ಅವರ ಅಂಧರ ಶಾಲೆಯಿದೆ.


ಡಬಲ್ ಧಮಾಕಾ


ಕಾನ್ಪುರದ ಬೀಚ್ಗೆ ತೆರಳುವುವಾಗ ದಶರಥ್ ಮೀನಿನ ಅಂಗಡಿಯನ್ನು ಯಾರೂ ಮಿಸ್ ಮಾಡಿಕೊಳ್ಳುವುದಿಲ್ಲ. ಯಾಕೆಂದರೆ ಅಲ್ಲೊಂದು ಕೂತೂಹಲ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ದಪ್ಪ ಮೀಸೆಯ ದಶರಥ್ ಈ ಮೀನು ಅಂಗಡಿಯ ಮಾಲೀಕ. ಅವನು ಅಂಗಡಿಯ ಮುಂದೆ ಒಂದು ಶೋ ಮಾಡುತ್ತಾನೆ. ಅದು ‘ಮೀನು ಮತ್ತು ಗಾಜು’ ಪ್ರದರ್ಶನ. ಮೀನು ಕತ್ತರಿಸುತ್ತಾನೆ, ಗಾಜು ಗಾಜು ತಿನ್ನುತ್ತಾನೆ!
ಹೌದು, ಅವನಿಗೆ ತಿಂಡಿ ಊಟಕ್ಕೆಲ್ಲಾ ಗಾಜು ಬೇಕೇ ಬೇಕು. ಬೀಚ್ಗೆ ಬಂದ ಪ್ರವಾಸಿಗರು ಬಾಟಲಿ ಕೊಟ್ಟು ತಮಾಷೆ ನೋಡುತ್ತಾರೆ. ಇವನ ಗಾಜು ತಿನ್ನುವ ಸಾಧನೆ ಕಂಡು ಕೆಲವರು ಹಣವನ್ನೂ ಕೊಡುತ್ತಾರೆ.
ತಮಾಷೆಯೆಂದರೆ, ಅವನಿಗೆ ಮೊದಲು ಗಾಜು ತಿನ್ನುವ ಅಭ್ಯಾಸ ಇರಲಿಲ್ಲ. ಅವನು ಇಪ್ಪತ್ತು ವರ್ಷದ ಹುಡುಗನಾಗಿದ್ದಾಗ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದ. ಸಾಯಬೇಕು ಎಂದು ಎರಡು ಬಾಟಲಿಯ ಗಾಜನ್ನು ಪುಡಿ ಮಾಡಿಕೊಂಡು ತಿಂದ. ಆದರೆ ಅವನು ಸಾಯಲಿಲ್ಲ, ಅದೇನು ರುಚಿ ಹತ್ತಿತೋ ಏನೋ ಅಂದಿನಿಂದ ಅವನ ಊಟ ಗಾಜು ಆಗಿಹೋಯಿತು. ಅವನು ಅಲ್ಲಿ ‘ಗ್ಲಾಸ್ಮ್ಯಾನ್’ ಎಂದೇ ಪ್ರಸಿದ್ಧಿ. ಕಾನ್ಪುರ್ ಬೀಚ್ಗೆ ಹೋದರೆ ಗ್ಲಾಸ್ಮ್ಯಾನ್ ಖಂಡಿತಾ ಸಿಗುತ್ತಾನೆ. ಇದೊಂಥರಾ ಡಬಲ್ ಧಮಾಕಾ.

ಶ್ರೀಕಂಠನ್ ಶಿಖರ










ಶ್ರೀಕಂಠನ್ ಶಿಖರ

ಜೀವನೋತ್ಸಾಹಕ್ಕೆ ಇನ್ನೊಂದು ಹೆಸರು ಗಾಯಕ ಆರ್.ಕೆ. ಶ್ರೀಕಂಠನ್. ಹಾಡುತ್ತಾ ಕೋಟಿ ಹೃದಯಗಳ ಮನಸ್ಸಲ್ಲಿ ಮನೆಮಾಡಿರುವ ಅವರು ಗಾನ ಗಾರುಡಿಗ. ಬರೋಬ್ಬರಿ ತೊಂಬತ್ತು ತುಂಬಿ ಶತಮಾನದ ಸಾಮಿಪ್ಯದಲ್ಲಿರುವ ಅವರ ವಯೋಮಾನ ಬಾಳ ಸಂಜೆಯಲ್ಲ. ಮುಂಜಾವಿನ ಮಂಜಿನಷ್ಟೇ ಮೃದು. ಆ ದಿವ್ಯ ಶರೀರದ ಭವ್ಯ ಶಾರೀರ ಇಬ್ಬನಿಯಷ್ಟು ಶುದ್ಧ. ಸ್ಫಟಿಕದಷ್ಟು ನಿಖರ. 14ನೇ ವಯಸ್ಸಿನಲ್ಲಿ ಆರಂಭವಾದ ಶ್ರೀಕಂಠನ್ ಸಂಗೀತ ಯಾತ್ರೆ 91ನೆ ವಯಸ್ಸಿನಲ್ಲೂ ಪ್ರಖರ!ಆಕಾಶವಾಣಿಯ ‘ಗಾನವಿಹಾರ’ ಯಾರಿಗೆ ತಾನೆ ಗೊತ್ತಿಲ್ಲ? ಗಾನವಿಹಾರದ ಮೂಲಕ ಸಂಗೀತ ಕಲಿತವರಿಗೆ ಲೆಕ್ಕವಿಲ್ಲ. 32 ವರ್ಷಗಳ ರೇಡಿಯೋ ಸಂಗೀತ ಪಾಠ ಶ್ರೀಕಂಠನ್ ಆವರ ಅಪಾರ ವಿದ್ವತ್ತಿನ ಪ್ರತೀಕ. ತೊಂಬತ್ತು ತುಂಬಿದ್ದರೂ ಅವರ ಹಾಡು ಎಲ್ಲೂ ಅಲುಗಾಡುವುದಿಲ್ಲ. ಹಾಡಲು ಕೂತರೆ ಮೂರುಗಂಟೆ ಮೇಲೇಳುವುದಿಲ್ಲ. ಭಾವ ಮತ್ತು ಭಕ್ತಿ ಅವರ ಹಾಡಿನ ಶಕ್ತಿ. ಶೃತಿ ರಾಗ ಲಯ ತಾಳಗಳ ಸಾಗರ ಅವರ ಸಂಗೀತ. ಮನೋಧರ್ಮದ ವರ್ಣಮಯ ಚಿತ್ತಾರಕ್ಕೆ ಎಣೆಇಲ್ಲ. ಲೆಕ್ಕಚಾರಗಳನ್ನು ಧಾಟಿ ತಮ್ಮದೇ ಮನೋಧರ್ಮದಲ್ಲಿ ಬಣ್ಣ ತುಂಬುವ ವರ್ಣಶಿಲ್ಪಿ!ತಮ್ಮ ತೊಂಬತ್ತು ವರ್ಷ ವಯಸ್ಸಿನಲ್ಲಿ ಎಂಭತ್ತು ವರ್ಷಗಳನ್ನು ಸಂಗೀತಕ್ಕೇ ಕೊಟ್ಟಿರುವ ಆರ್.ಕೆ. ಶ್ರೀಕಂಠನ್ ನಮ್ಮ ನಾಡಿನ ಹೆಮ್ಮೆ. ಪುರಂದರ ದಾಸರ ಕೃತಿಗಳಿಗೆ ಸ್ವರೂಪ ಕೊಟ್ಟಿರುವ ಅವರ ಕಾರ್ಯ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅನನ್ಯ. ಹಾಸನ ಜಿಲ್ಲೆಯ ರುದ್ರಪಟ್ಟಣವೆಂಬ ಪುಟ್ಟ ಹಳ್ಳಿಯಿಂದ ಬಂದವರು ಶ್ರೀಕಂಠನ್. ಪ್ರತಿಷ್ಠಿತ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸದಸ್ಯರಾಗಿ, ಕೇರಳದ ಸರ್ಕಾರಿ ಸಂಗೀತ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ. ಕೆಸೆಟ್ ಕ್ರಾಂತಿ ಮೂಲಕ ಮನೆ ಮನ ತಲುಪಿದ ಅವರ ಹಾಡು ಎಂದಿಗೂ ಹೊಚ್ಚ ಹೊಸತಾಗಿದೆ.ಅವರ ಮಾತು ಕೂಡ ಅಷ್ಟೆ, ನಿಚ್ಚಳ ನಿಷ್ಕಪಟ. ಸಂಗೀತದಷ್ಟೇ ಇಂಪು. ಮತ್ತೆ ಮತ್ತೆ ಮಾತನಾಡಬೇಕು ಎನ್ನುವಷ್ಟು ಮೊನಚು. ಯಾರಾದರೂ ‘ನೀವು ಬಹಳ ಸಾಧಿಸಿದ್ದೀರಿ’ ಅಂದರೆ ‘ನಾನೊಬ್ಬ ಪುಟ್ಟ ಮಗು ವಿಜ್ಞಾನ ಸಾಗರದ ದಂಡೆಯಲ್ಲಿ ಕಲ್ಲುಗಳನ್ನು ಆಯ್ದುಕೊಂಡು ಆಟವಾಡುತ್ತಿದ್ದೇನೆ’ ಎಂದು ಐಸಾಕ್ ನ್ಯೂಟನನ್ನನ ಮಾತು ಹೇಳುತ್ತಾ ತಮ್ಮ ಮನಸ್ಸಿನಲ್ಲಿರುವ ಮುಗ್ಧತೆ ತೋರುತ್ತಾರೆ. ಸಂಗೀತವನ್ನು ಮಾತೃಭಾಷೆಯನ್ನಾಗಿ ಮಾಡಿಕೊಂಡು ನಿತ್ಯವೂ ಮಾತನಾಡುತ್ತಿರುವ ಅವರಿಗೆ ಪ್ರಶಸ್ತಿ ಮನ್ನಣೆಗಳಿಗೆ ಲೆಕ್ಕವಿಲ್ಲ. ನೂರಾರು ಬಿರುದುಗಳು ಅವರ ಮುಡಿಗೇರಿವೆ. ಜ. 14 ಅವರ ಹುಟ್ಟು ಹಬ್ಬ. ಅಲ್ಲಿಗೆ ಅವರಿಗೆ 91 ವರ್ಷ ತುಂಬುತ್ತಿದೆ. ಅವರು ಶತಮಾನದತ್ತ ನಡೆಯುತ್ತಿದ್ದಾರೆ. ಅವರ ತುಂಬು ಜೀವನ ಎಲ್ಲರ ಬಾಳಿಗೂ ಸ್ಫೂರ್ತಿಯ ಚಿಲುಮೆ.

ಸೇವೆಯೆಂಬ ಸವಿಜೇನು



ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನಲ್ಲಿ ಮೂರ್ಬಂದ್ ಎಂಬ ಹಳ್ಳಿ ಇದೆ. ಈ ಹಳ್ಳಿಯಲ್ಲಿ ಸದಾ ಜನಜಾತ್ರೆ. ಹಾಗಂತ ಅಲ್ಲಿ ಯಾವ ಪವಾಡವೂ ಇಲ್ಲ, ಆದರೆ ಪವಾಡ ಪುರಷನಂಥ ಒಬ್ಬ ವ್ಯಕ್ತಿ ಇದ್ದಾರೆ. ಅವರ ಹೆಸರು ಹಕೀಮ್ ಅಬ್ದುಲ್ ರೆಹಮಾನ್ ಪಾಷ. ಇವರು ಪ್ರಸಿದ್ಧ ನಾಟಿ ವೈದ್ಯರು. ಯಾವುದೇ ಕಾಯಿಲೆಯಾದರೂ ಸರಿ, ಕೈ ಎತ್ತಿ ಎನೇ ಕೊಟ್ಟರೂ ಖಾಯಿಲೆ ಮಾಯವಾಗುತ್ತದೆ. ಇದೇ ಹಕೀಮರ ಪವಾಡ!ಅವರ ಮನೆ ಮುಂದೆ ನಿತ್ಯ ಜನಸಾಗರವೇ ಸೇರುತ್ತದೆ. ಇನ್ನೊಂದು ಕುತೂಹಲ ಸಂಗತಿಯೆಂದರೆ ಹಕೀಮರು ಎಲ್ಲಿ ಇರುತ್ತಾರೋ ಅಲ್ಲಿ ಆಸ್ಪತ್ರೆಯಾಗಿಬಿಡುತ್ತದೆ. ಅವರು ಮನೆಯಲ್ಲಿರಲಿ, ಹೊಲದಲ್ಲಿರಲಿ, ಪೇಟೆಗೆ ಬರಲಿ, ನಗರಕ್ಕೆ ಬರಲಿ ಅವರ ಮುಂದೆ ದೊಡ್ಡದೊಂದು ಕ್ಯೂ ನಿಂತುಬಿಡುತ್ತದೆ. ಹಕೀಮ್ ಬಹಳ ಒಳ್ಳೆಯ ರೈತರು. ಬೇಸಾಯದ ಜೊತೆಗೆ ನಾಟಿ ವೈದ್ಯಕೀಯ ವೃತ್ತಿಯನ್ನು ಕಳೆದ ಎರಡು ದಶಕಗಳಿಂದ ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ. ಜನರ ಮೇಲೆ ಅವರಿಗೆ ಅಪಾರ ಪ್ರೀತಿ. ಅವರು ಎಲ್ಲಿದ್ದರೂ ಜನರ ನೋವುಗಳಿಗೆ ಸ್ಪಂದಿಸುತ್ತಾರೆ.ಅವರ ಮನೆಯಂತೂ ಹಕೀಮರ ಕರ್ಮಭೂಮಿ. ಮನೆಯಲ್ಲಿ ಗಿಡ ಮೂಲಿಕೆಗಳು, ನಾರು ಬೇರುಗಳು ಯಾವಾಗಲೂ ತುಂಬಿರುತ್ತವೆ. ನಮ್ಮ ಇಂಗ್ಲಿಷ್ ಡಾಕ್ಟರ್ಗಳ ಹಾಗೆ ಅವರ ಮನೆಮುಂದೆ ಕೆಲಸದ ಅವಧಿಯ ಟೈಂ ಟೇಬಲ್ ಇಲ್ಲ. ಅವರ ಮನೆ ಸೇವೆಗೆ ಸದಾ ತೆರೆದಿರುತ್ತದೆ. ಅವರ ಮನೆಯ ಮುಂದೆ ಬಂದರೆ ಗಿಡಮೂಲಿಕೆಗಳ ಸುವಾಸನೆ ಮೂಗಿಗೆ ರಾಚುತ್ತದೆ. ಹಲ್ಲು ನೋವು, ಮೂಳೆ ತೊಂದರೆ, ತಲೆ ನೋವು ಮುಂತಾದ ಕಾಯಿಲೆಗಳಿಗೆ ಹಕೀಮರ ಮದ್ದು ರಾಮಬಾಣ.ಹೊರ ರಾಜ್ಯಗಳಿಂದಲೂ ಜನರು ಹಕೀಮರ ಬಳಿಗೆ ಬರುತ್ತಾರೆ. ಹಕೀಮರು ಯಾರಬಳಿಯೂ ಇಷ್ಟು ಹಣ ಕೊಡಬೇಕು ಎಂದು ಬೇಡಿಕೆ ಒಡ್ಡುವುದಿಲ್ಲ. ಅವರು ಕೊಟ್ಟಷ್ಟು ಇವರು ತೆಗೆದುಕೊಂಡಷ್ಟು. ಹಲವು ವೆಳೆ ಗಾಂಧಿ ಲೆಕ್ಕ! ಬರೀ ರೋಗಿಗಳು ಮಾತ್ರ ಹಕೀಮರ ಬಳಿ ಬರುವುದಿಲ್ಲ. ಜೊತೆಗೆ ಮನೆಯಲ್ಲಿ ತೊಂದರೆಯಿದ್ದರೂ ಪರಿಹಾರಕ್ಕಾಗಿ ಹಕೀಮರ ಬಳಿ ಬರುತ್ತಾರೆ. ಅವರ ಬಾಯಿಂದ ಏನೇ ಹೇಳಿದರೂ ಅದು ನಿಜವಾಗುತ್ತದೆ ಎಂದು ಜನರು ನಂಬುತ್ತಾರೆ.59 ವರ್ಷ ವಯಸ್ಸಿನ ಹಕೀಮರು ಯಾರಿಂದಲೂ ಏನನ್ನೂ ಆಪೇಕ್ಷಿಸುವುದಿಲ್ಲ. ಎಲೆಮರೆ ಕಾಯಿಯಂತೆಯೇ ತಮ್ಮ ಸೇವಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇವರ ಸೇವೆಯನ್ನು ಮೈಸೂರಿನ ರಂಗಾಯಣ ಗುರುತಿಸಿದ್ದು, ಈ ಬಾರಿಯ ದಸರಾದಲ್ಲಿ ಸನ್ಮಾನ ಮಾಡಿದೆ.

Tuesday, December 28, 2010

ದೊಡ್ಡವರೆಲ್ಲ ಜಾಣರಲ್ಲ!



(ಉದಯವಾಣಿ ‘ಚಿನ್ನಾರಿ’ ಪುರವಣಿಯಲ್ಲಿ ದಿ. 20-11-2010ರಂದು ಪ್ರಕಟಿತ)


ಭಾರಧ್ವಜಮಹರ್ಷಿ ಮಹಾಜ್ಞಾನಿ. ಮೂರು ಲೋಕಗಳಲ್ಲಿರುವ ಸಕಲ ವಿದ್ಯೆಗಳನ್ನು ತಮ್ಮ ತೆಕ್ಕೆಯಲ್ಲಿ ಇಟ್ಟುಕೊಂಡಿದ್ದ ಅವರು ವಿದ್ಯಾ ಶಿಖಾಮಣಿಗಳು. ಸಕಲ ಕಲಾಪಾರಂಗತರು. ವೇದವಿದ್ಯಾದಿ ಪಂಡಿತರು.
ಒಂದು ದಿನ ಧ್ಯಾನ ನಿರತರಾಗಿರುವ ಸಮಯದಲ್ಲಿ ಅವರ ಮನಸ್ಸಿನಲ್ಲಿ ಒಂದು ಚಿಂತೆ ಹತ್ತಿತು. ‘ನನಗೆ ಎಲ್ಲವೂ ಗೊತ್ತಿಗೆ, ನನಗೆ ಕಲಿಯಬೇಕಾದುದು ಈ ಸೃಷ್ಟಿಯೊಳಗೆ ಯಾವುದೂ ಇಲ್ಲ. ನಾನು ಸೃಷ್ಟಿಕರ್ತನಿಂದ ಬ್ರಹ್ಮಜ್ಞಾನ ಪಡೆಯಲು ಇದು ಸಕಾಲ’ ಎಂಬ ಚಿಂತೆ ಅವರ ತಲೆಯೊಳಗೆ ಬಂತು.
ಬ್ರಹ್ಮಜ್ಞಾನ ಅಂತಿಮವಾದದು. ಬ್ರಹ್ಮಜ್ಞಾನ ಪಡೆದ ಅತಿರಥರು ಲೋಕದಲ್ಲಿ ಯಾರೂ ಇಲ್ಲ. ಅದು ಬ್ರಹ್ಮನಿಗೆ ಮಾತ್ರ ಸೀಮಿತವಾದ ಜಾನ. ಹಾಗಾಗಿ ಅದ್ಯಾವ ಕೆಟ್ಟ ಘಳಿಗೆಯಲ್ಲಿ ಭಾರಧ್ವಜ ಮಹರ್ಷಿಗಳಿಗೆ ಬ್ರಹ್ಮಜಾನದ ಅತಿಯಾಸೆ ತಲೆಹೊಕ್ಕಿತೋ ಗೊತ್ತಿಲ್ಲ, ಬ್ರಹ್ಮಜ್ಞಾನವನ್ನು ಕರುಣಿಸು ಎಂದು ಕೇಳಲು ಭಾರಧ್ವಜರು ಬ್ರಹ್ಮನ ಬಳಿಗೆ ನಡೆದರು.
ಸೃಷ್ಟಿಕರ್ತ ಬ್ರಹ್ಮ ವಿಶ್ರಾಂತಿಯಲ್ಲಿ ತೊಡಗಿಡದ್ದರು. ಭಾರಧ್ವಜರು ಬಂದು ಬ್ರಹ್ಮನಿಗೆ ನಮಸ್ಕರಿಸಿದರು. ಬ್ರಹ್ಮ ಭಾರಧ್ವಜರ ಮುಖ ನೋಡಿ ನಕ್ಕು ಏನು ಸಮಾಚಾರ ಎಂದು ಕೇಳಿದರು. ಅದಕ್ಕೆ ಭಾರಧ್ವಜರು ’ನನಗೆ ಮೂರು ಲೋಕಗಳ ಮಾಹಿತಿಯೂ ಇದೆ. ನನಗೆ ಗೊತ್ತಿಲ್ಲದ ವಿಷಯವೇ ಇಲ್ಲ. ಹಾಗಾಗಿ ನನಗೆ ಬ್ರಹ್ಮಜ್ಞಾನವನ್ನು ಕರುಣಿಸು ಎಂದು ಭಾರಧ್ವಜರು ಕೇಳಿದರು.
ಭಾರಧ್ವಜರ ಈ ಮಾತು ಕೇಳಿದ ಬ್ರಹ್ಮ ಯಾವ ಮಾತನ್ನೂ ಆಡದೆ, ನಿಶ್ಯಬ್ಧವಾಗಿ ಕುಳಿತರು. ಇದರಿಂದ ಕೆರಳಿದ ಭಾರಧ್ವಜರು ‘ನನಗೆ ನೀನು ಅವಮಾನ ಮಾಡುತ್ತಿದ್ದೀಯಾ, ನನಗೆ ಗೊತ್ತಿಲ್ಲದ್ದು ಇದೆ ಎಂದು ನಿನ್ನ ಚಿಂತೆಯೇ? ಎಂದು ಕೇಳಿದರು.
ಅದಕ್ಕೆ ಬ್ರಹ್ಮ ನೋಡು ಮಹರ್ಷಿ ನೀನು ಜ್ಞಾನಿ ಎಂಬುದರಲ್ಲಿ ನನಗೆ ಅನುಮಾನವಿಲ್ಲ. ಆದರೆ......ಎಂದು ಹೇಳುವಾಗ ಮತ್ತಷ್ಟು ಕೆರಳಿದ ಭಾರಧ್ವಜರು ಬ್ರಹ್ಮಜ್ಞಾನ ನಿನಗೆ ಮಾತ್ರ ಸೀಮಿತವೆ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಮಳೆ ಸುರಿಸಿದರು.
ಬ್ರಹ್ಮ ತನ್ನ ಎದುರಿನಲ್ಲಿದ್ದ ಪರದೆಯ ಬಳಿ ನೋಡಿದರು. ಪರದೆಯ ಮೇಲೆ ಕೆಲವೊಂದು ಅಕ್ಷರಗಳು ಮೂಡಿದವು. ಭಾರಧ್ವಜರನ್ನು ನೋಡುತ್ತಾ ಬ್ರಹ್ಮ ‘ಮಹರ್ಷಿ ನಿನಗಿವು ಗೊತ್ತಾ ಅಂದರು. ತಡವರಿಸುತ್ತಾ ಭಾರಧ್ವಜರು ಏನದು......ಅದನ್ನು ನಾನು ಕೇಳಿಯೇ ಇಲ್ಲ ಅಂದರು.
ಆಗ ಬ್ರಹ್ಮ, ಅದು ನನಗೂ ಗೊತ್ತಿಲ್ಲ ಮುನಿವರ್ಯ. ನಾನೂ ಕಲಿಯುತ್ತಿದ್ದೇನೆ. ಪ್ರತಿದಿನ ಮುಂಜಾನೆ ಇವುಗಳನ್ನು ಶಾರದೆ ನನಗೆ ಬೋಧಿಸುತ್ತಿದ್ದಾಳೆ ಎಂದು ಹೇಳಿದರು. ಬ್ರಹ್ಮನ ಈ ಮಾತುಗಳನ್ನು ಕೇಳಿದ ಭಾರಧ್ವಜರು ಧರಗಿಳಿದು ಹೋದರು. ತಮ್ಮ ಕಣ್ಣುಗಳಲ್ಲಿ ನೀರು ಧಾರೆಯಾಗಿ ಹರಿಯಿತು. ‘ನನ್ನನ್ನು ಕ್ಷಮಿಸು, ನನ್ನ ಅಹಂಕಾರ ನನಗೆ ಸರಿಯಾದ ಪಾಠ ಕಲಿಸಿತು. ಪರಶಿವನೇ ಇನ್ನೂ ಕಲಿಯಿತ್ತಿದ್ದೇನೆ ಎಂದು ಹೇಳುವಾಗ ನಾನು ಯಾವ ಜ್ಞಾನಿ? ನಾನು ಅಜ್ಞಾನಿ ಅಜ್ಞಾನಿ ಎಂದು ಹೇಳುತ್ತಾ ಭಾರಧ್ವಜರು ಕಾಡಿಗೆ ತೆರಳಿದರು.
ಈ ಕತೆಯಲ್ಲಿ ಎಂತಹ ಮಹತ್ವದ ತತ್ವ ಅಡಗಿದೆ ಅಲ್ಲವೆ? ಇಲ್ಲಿ ಯಾರೂ ದೊಡ್ಡವರಲ್ಲ. ಮರಕ್ಕಿಂತ ಮರದೊಡ್ಡದು. ನನಗೆ ಎಲ್ಲವೂ ಗೊತ್ತು ಎಂದು ಹೇಳುವವರೂ ಯಾರೂ ಇಲ್ಲ. ಭಗವಂತನೂ ಕೂಡ. ಸೃಷ್ಟಿಕರ್ತನೇ ಇನ್ನೂ ಕಲಿಯುತ್ತಿದ್ದೇನೆ ಎಂದು ಹೇಳುವ ಮೂಲಕ ಜಗತ್ತಿಗೆ ಮಹತ್ವದ ಸಂದೇಶ ಸಾರಿದ್ದಾರೆ.

Saturday, November 20, 2010



`ಭೂಮಿ' ಹುಡು­ಗರ ಸಾಹ­ಸ­ಗಾಥೆ


ದಿನಂ­ಪ್ರತಿ ಕೆಲಸ ಮಾಡ್ತೀವಿ. ಅದೇ ರೋಡು, ಅದೇ ಟ್ರ್ಯಾಫಿಕ್ಕು. ಅದೇ ಆಫೀಸು, ಅದೇ ಕಂಪ್ಯೂ­ಟರು. ಅದೇ ಬಾಸು, ಅದೇ ಕೊಲೀಗು. ಅದೇ ಊರು....ವಾ­ರ­ದೊ­ಳ­ಗೊಂದು ವೀಕ್ಲಿ ಆಫು. ಅದೇ ಫೋರಂ. ಅದೇ ಟಾಕೀಸು. ಅಂಥದ್ದೇ ಫಿಲ್ಮು. ನೋ ನೋ ನೋ ವೀಕ್ಲಿ ಆಫ್‌ ಬೇಡ್ವೇ ಬೇಡಾ ಓಟಿ ಮಾಡೋಣ!
ಇಷ್ಟೆಲ್ಲಾ ಮಾಡಿ, ಜೀವ­ನ­ದೊ­ಳಗೆ ಒಂದಷ್ಟು ಥ್ರಿಲ್‌ ಬೇಡ್ವಾ? ಜೋಶ್‌ ಬೇಡ್ವಾ? ಕುತೂ­ಹಲ ಬೇಡ್ವಾ? ಬೇಕಾ­ಗಿ­ರೋದು, ಬ್ಯಾಡ­ದಿ­ರೋದು ಎಲ್ಲಾನು ತುಂಬ್ಕೊಳ್ಳೋ ನೂರ್ಮಡಿ ಮೆಮೋರಿ ಹೊಂದಿರೊ ಈ ಬ್ರೈನಿಗೆ ಒಂಚೂರು ರೆಸ್ಟ್‌ ಬೇಡ್ವಾ? ಅಷ್ಟಕ್ಕೂ ಆ ಬಡ­ಪಾಯಿ ಬ್ರೈನು ಹಣ ಕೇಳತ್ತಾ ಒಡವೆ ಕೇಳುತ್ತಾ ವಸ್ತ್ರ ಕೇಳುತ್ತಾ?
ಹೌದು. ಎಲ್ಲಾ ಬೇಕು ನಿಜ. ಆದ್ರೆ....ಈ ಥ್ರಿಲ್ಲು, ಜೋಶು ಇವು­ಗಳ ಅರ್ಥನೇ ತಿಳೀ­ತಿಲ್ಲ! ಪೋರಂ­ನಲ್ಲಿ ಫಿಲ್ಮ್‌ ನೋಡೋ­ದ­ಕ್ಕಿಂತ ಥ್ರಿಲ್‌ ಬೇಕಾ? ಕಾಫಿ ಡೇನಲ್ಲಿ ಹವರ್ಸ್‌ ಹವರ್ಸ್‌ ಕೂರೋ­ದ­ಕ್ಕಿಂತ ಕುತೂ­ಹಲ ಬೇಕಾ? ರಾತ್ರಿ ಹನ್ನೆ­ರಡು ಹತ್ತು­ತ್ತಲೇ ಎಂ.ಜಿ. ರೋಡಲ್ಲಿ ಹಂಡ್ರೆಡ್‌ ಸ್ಪಿಡ್‌­ನಲ್ಲಿ ರೋಡ್‌ ರೇಸ್‌ ಮಾಡೋ­ದ­ಕ್ಕಿಂತ ಜೋಶ್‌ ಬೇಕಾ? .....ತಲೆ ಚಿಟ್ಟು ಹಿಡಿದು ಹೋಯ್ತು. ವಾಟ್‌ ಈಸ್‌ ಮೀನ್‌ ಬೈ ಜೋಶ್‌!?
ಬೆಟ್ಟ ಹತ್ತೊಣ: ಆ ಹುಡು­ಗ­ರಿಗೆ ಬೆಟ್ಟ ಹತ್ತೊ­ದ್ರಲ್ಲಿ ಅದೆಂ­ಥದೋ ಜೋಶ್‌. ಮೆಟ್ಟ­ಲಿವೆ ಹತ್ಕೊಂ­ಡೋ­ಗ್ರಯ್ಯ ಅಂದ್ರೆ ನೋ ನೋ ಅಂತಾರೆ. ಬಸ್‌ ಹೋಗ್ತವೆ ಹೋಗ್ರಯ್ಯ ಅಂದ್ರೆ ನೋ ನೋ ಅಂತಾರೆ. ಒಂದ­ಥಸ್ತು ಮಹಡಿ ಹತ್ತೋಕೆ ಮುಖ ನೋಡುವ ಇವ್ರು ಸಮುದ್ರ ಮಟ್ಟ­ದಿಂದ ಹತ್ತು ಸಾವಿರ ಅಡಿ ಎತ್ತ­ರದ ಬೆಟ್ಟ ಹತ್ತುಲು ಮೂಖ ಮೂತಿ ನೋಡಲ್ಲ! ಎಂಥ ಹುಚ್ಚು­ತನ! ಇಲ್ಲ ಇಲ್ಲ... ಇದೇ ಜೋಶ್‌! ದಿಸ್‌ ಈಸ್‌ ವಾಟ್‌ ಮೀನ್‌ ಬೈ ಥ್ರಿಲ್‌.
ಅದು ಟ್ರೆಕ್ಕಿಂಗ್‌. ಅವರ ತಂಡದ ಹೆಸರು: `ಭೂಮಿ...ಸು­ತ್ತು­ವೆವು ನಾವು' ಅದೆಂಥಾ ದುರ್ಗಮ ಬೆಟ್ಟ­ವಾದ್ರೂ ಸೈ. ಪಟ್ಟಿ­ಯೊ­ಳ­ಗಿ­ರುವ ಬೆಟ್ಟ­ಗಳು: ಕೊಡ­ಚಾದ್ರಿ ಪರ್ವತ, ಕುಮಾರ ಪರ್ವತ, ರಾಮ­ನ­ಗರ ಬೆಟ್ಟ, ಮಧು­ಗಿರಿ ಪರ್ವತ ಹಾಗೂ ಮೊನ್ನೆ ತಾನೆ ಹೋಗಿ ಬಂದ ಕರ್ನಾ­ಟ­ಕದ ಅತಿ ಎತ್ತ­ರದ ಮುಳ್ಳ­ಯ್ಯನ ಗಿರಿ ಶಿಖರ.
ಟ್ರೆಕ್ಕಿಂಗ್‌ ಮಾಡೋ­ದ್ರಲ್ಲಿ ಇವರು ಅದೆಷ್ಟು ಥ್ರಿಲ್‌ ಆಗ್ತಾರೆ ಅಂದ್ರೆ. ಅದನ್ನು ಹೇಳೋಕೆ ಸಾಧ್ಯನೇ ಇಲ್ವಂತೆ. ಅದೊಂದು ಘಟ­ನೆ­ಯಾ­ಗಿದ್ರೆ ಪಟ್ಟಂತ ಹೇಳ­ಬ­ಹು­ದಿತ್ತು. ಆದ್ರೆ ಅದೊಂದು ಅನು­ಭವ. ಅನು­ಭ­ವಿ­ಸ­ಬೇ­ಕಷ್ಟೆ ಅಂತಾರೆ.
ಅವರು ಹೇಳಿದ್ದು: ಅದು ಮುಳ್ಳ­ಯ್ಯನ ಗಿರಿ. ನಾವು ಸಹಸ್ರ ಅಡಿ ಎತ್ತ­ರ­ದ­ಲ್ಲಿದ್ವಿ. ಮೋಡ­ದೊ­ಳಗೆ ಮುಚ್ಚಿ ಹೋಗಿದ್ವಿ. ಎತ್ತ ನೋಡಿ­ದ­ರತ್ತ ಮಂಜಿನ ರಾಶಿ. ಒಬ್ಬ­ರಿ­ಗೊ­ಬ್ಬರು ಕಾಣಲ್ಲ. ಹೇ.. ಇದ್ದೀಯ...ಹೀಗೆ ಮಾತಾ­ಡ್ಬೇಕು. ಅವನ ಮೀಸೆ ಮೇಲೊಂದು ಸಣ್ಣ ಮಂಜಿನ ಹನಿ. ಮುಟ್ಟಿ­ದರೆ ಕೆಟ್ಟೋ­ಗುತ್ತೆ. ಬಿಡ­ಕ್ಕಾ­ಗುತ್ತಾ? ಕೆಮರಾ ಕಣ್ಣು ಫುಲ್‌ ಬಿಜಿ. ಉಶ್ಯಪ್ಪಾ! ಸುಸ್ತಾಯ್ತು. ಚಾಕ­ಲೇಟ್‌ ತಿನ್ನೊಣ. ಕವರ್‌ ಎಸ­ದೀರಿ ಜೋಕೆ. ಜೇಬ್ನಲ್‌ ಇಟ್ಕೊಳಿ. ದಿಸ್‌ ಈಸ್‌ ಎನ್ವಿ­ರಾ­ನ್‌­ಮೆಂಟ್‌ ಫ್ರೆಂಡ್ಲಿ ಟ್ರೆಕ್ಕಿಂಗ್‌!
ಅಬ್ಬಾ. ಅಲ್ಲೊಂದು ಎತ್ತ­ರದ ವ್ಯೂ ಪಾಯಿಂಟ್‌. ಕೆಳಗೆ ನೋಡಿದ್ರೆ, ಸ್ವರ್ಗ­ಕ್ಕಿನ್ನು ಮೂರೇ ಗೇಣು. ಛೆ, ಮೊಬೈಲ್‌ ನಟ್‌­ವ­ರ್ಕಿಲ್ಲ. ಈ ಸುಖದ ಅನು­ಭವ ಹಂಚ್ಕೊ­ಳ್ಳೋಣ ಅಂದ್ರೆ. ಸಿಕ್ಕೇ ಬಿಡ್ತು ತುತ್ತ ತುದಿ. ಅಲ್ಲೊಂದು ಪುಟ್ಟ­ಗುಡಿ. ದೇವ­ರಿ­ಗೊಂದು ನಮ­ಸ್ಕಾರ. ತಮಾಷೆ ಏನು ಗೊತ್ತಾ? ನಾವು ಕಷ್ಟ­ಪಟ್ಟು ಟ್ರೆಕ್‌ ಮಾಡ್ಕೊಂಡ್‌ ಬಂದ್ರೆ, ಬಸ್ಸಲ್ಲಿ ಬಂದು ನಾಲ್ಕು ಮೆಟ್ಟಿಲು ಏರಿ ಏದು­ಸಿರು ಬಿಡುವ ಟೂರಿ­ಸ್ಟ್‌­ಗಳ ಸಾಧ­ನೆಯ ಮಾತು­ಗಳು.
ಬೆಟ್ಟದ ತುದಿ­ಯಲ್ಲಿ ಕುವೆಂಪು ನೆನ­ಪಾ­ದರು...
ಹೋಗು­ವೆನು ನಾ ಹೋಗು­ವೆನು ನಾ
ನನ್ನ ಒಲು­ಮೆಯ ಗೂಡಿಗೆ
ಸಿರಿ ಬನಂ­ಗಳ ಗಿರಿ­ಬ­ನಂ­ಗಳ
ಸಗ್ಗ­ಸು­ಖದ ಬೀಡಿಗೆ
ಹೋಗು­ವೆನು ನಾ...

ನಾವು ಹತ್ತಿದ್ದು ಮುಳ್ಳ­ಯ್ಯ­ನ­ಗಿರಿ, ಇಳಿ­ದಿದ್ದು ಬಾಬಾ ಬುಡನ್‌ ಗಿರಿ. ಇದು ಸುಲ­ಭದ ಚಾರ­ಣ­ವಲ್ಲ. ನಿಜಕ್ಕೂ ಧೈರ್ಯ ಬೇಕು. ಅದು ನಡೆ­ದಾ­ಡುವ ದಾರಿ­ಯಲ್ಲ, ದಾರಿ­ಯಿ­ಲ್ಲದ ಬೆಟ್ಟ. ನಾವೇ ದಾರಿ ಹುಡು­ಕ­ಬೇಕು. ದಾರಿ ತಪ್ಪಿದ ಮಕ್ಕ­ಳಾ­ದರೆ ದೇವ್ರೇ ಗತಿ! ದಿಕ್ಸೂಚಿ ಇಲ್ಲ­ದಿ­ದ್ದರೆ ಚಾರಣ ಕಷ್ಟ. ಗಾಯ ಗ್ಯಾರಂಟಿ. ಫಸ್ಟ್‌ ಏಡ್‌ ಬೇಕೇ ಬೇಕು. ಟ್ರೆಕ್ಕಿಂಗ್‌ ಅಂದ್ರೆ ಬೆನ್ನಿ­ಗೊಂದು ಬ್ಯಾಗು ಇದ್ದೇ ಇರುತ್ತೆ. ಕೆಲ­ವೊಂದು ಹತಾ­ರ­ಗಳೂ ಜತೆ­ಯಲ್ಲಿ ಇಟ್ಕೊಂ­ಡಿ­ರ­ಬೇಕು. ಟ್ರೆಕ್ಕಿಂಗ್‌ ಸಾಮಾ­ಗ್ರಿ­ಗಳು ಅಂಗ­ಡೀಲಿ ಸಿಗ್ತವೆ. ಗುಂಡಾ­ಗಿ­ರುವ ಭೂಮಿನಾ ಒಂದು ಸುತ್ತು ಹಾಕಿ­ದೆ­ವೆಂಬ ಭಾವ ನಮ್ಮದು. ಈ ಅನು­ಭಾವ ಮತ್ತೆ­ಲ್ಲಿಂದ ಸಿಗತ್ತೆ ಹೇಳಿ?
`ಭೂಮಿ' ಹುಡು­ಗರು ಬೆಟ್ಟ ಹತ್ತಿದ ಕತೆ ಇದು. ಇನ್ನೆಲ್ಲೂ ಈ ಥ್ರಿಲ್‌ ಸಿಕ್ಕೋದೆ ಇಲ್ಲಾ ಅಂತಾರೆ ಇವ್ರು. ದೇಶ ಸುತ್ತ ಬೇಕು ಇಲ್ಲಾ ಓದ­ಬೇಕು ನಿಜ, ಮುಂದಕ್ಕೆ ಸೇರ್ಸೊ­ದಾದ್ರೆ ಬೆಟ್ಟ ಹತ್ಬೇಕು. ಪ್ರಕೃ­ತಿಯ ಅಂಗ­ಳ­ದೊ­ಳಗೆ ಅವಳ ಸೌಂದರ್ಯ ಕಾಣುವ ಸೌಭಾಗ್ಯ ಚಾರಣ. ಕೆಲ­ವರು ಚಾರ­ಣ­ವನ್ನು ಮೋಜು ಅಂದ್ಕೊಂ­ಡಿ­ದಾರೆ. ಚಾರ­ಣ­ಕ್ಕೋ­ದ­ವರು ಪರಿ­ಸ­ರ­ವನ್ನು ಹಾಳು ಮಾಡಿ ಬರ್ತಾರೆ. ಚಾರಣ ಹೊಸ­ದೊಂ­ದನ್ನು ಜಗ­ತ್ತೊಂ­ದನ್ನು ತೋರಿ­ಸು­ತ್ತದೆ. ಇದು ಮೋಜು ಅಲ್ಲವೇ ಅಲ್ಲ. ಇದು ಸಾಹ­ಸ­ಗಾಥೆ.ಙ

Thursday, June 3, 2010



ಮನೋಧರ್ಮ ವರ್ಣಶಿಲ್ಪಿ ಶ್ರೀಕಂಠನ್‌!


ಅವರು ತೊಂಭತ್ತರ ಎತ್ತರಕ್ಕೆ ಏರಿದ್ದಾರೆ. ಶತಮಾನ ಸಾಮಿಪ್ಯದ ವಯೋಮಾನ ಅವರಿಗೆ ಬಾಳ ಸಂಜೆಯಲ್ಲ. ಸುಸ್ವರಗಳಿಂದ ಸೃಷ್ಟಿಯಾದ ಮುಂಜಾವು. ಪ್ರತಿನಿತ್ಯ ಸಂಗೀತ, ಸಾಧನೆ, ಆರಾಧನೆ. ಸಂಗೀತಕ್ಕೆ ಅವರ ಆತ್ಮಾರ್ಪಣೆ! ಆ ದಿವ್ಯ ಶರೀರದ ಭ್ಯವ್ಯ ಶಾರೀರ ರಸಿಕರನ್ನು ತನ್ಮಯಗೊಳಿಸಿದೆ. ಆ ದನಿ ಇಬ್ಬನಿಯಷ್ಟೆ ಶುದ್ಧ. ಸ್ಪಟಿಕದಷ್ಟೇ ನಿಖರ! ಭಾವ ಮತ್ತು ಭಕ್ತಿ ಅವರ ಆಸ್ತಿ. ಹಾಡುತ್ತಾ ಹಾಡುತ್ತಾ ತಲೆಮಾರು ತಲುಪಿದ್ದಾರೆ. ತೊಂಭತ್ತರಲ್ಲಿ ಎಂಭತ್ತನ್ನು ಸಂಗೀತಕ್ಕೇ ಕೊಟ್ಟಿರುವ ಅವರೊಬ್ಬ ಯುಗಪುರುಷ!
ಅವರು ಸಂಗೀತ ಕಲಾನಿಧಿ, ಗಾಯಕ ಚೂಡಾಮಣಿ, ಗಾನ ಭಾಸ್ಕರ, ಶೃತಿ ಸಾಗರ, ನಾದನಿಧಿ, ಕಲಾ ಸಾಗರ, ಗಾನರತ್ನ, ಲಯಕಲಾ ನಿಪುಣ........ಎಂಬಿತ್ಯಾದಿ ಬಿರುದಾಂಕಿತ ವಿದ್ವಾನ್‌. ಆರ್‌.ಕೆ. ಶ್ರೀಕಂಠನ್‌(ರುದ್ರಪಟ್ನಂ ಕೃಷ್ಣಶಾಸ್ತ್ರೀ ಶ್ರೀಕಂಠನ್‌). ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕದ ಅತ್ಯಂತ ಹಿರಿಯ ಹೆಮ್ಮರ. ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯಾಭಿವ್ಯಕ್ತ ಮತ್ತು ಮಾಧುರ್ಯಕ್ಕೆ ಇನ್ನೊಂದು ಹೆಸರು ಆರ್‌.ಕೆ. ಶ್ರೀಕಂಠನ್‌. ಲೆಕ್ಕಾಚಾರಗಳನ್ನೆಲ್ಲಾ ಧಾಟಿ ತನ್ನದೇ ಮನೋಧರ್ಮದ ಬಣ್ಣ ತುಂಬುವ ವರ್ಣಶಿಲ್ಪಿ! ಹಾಸನದ ಹಳ್ಳಿಯಿಂದ ಜಗತ್ತಿನಾದ್ಯಂತ ಮಿಡಿದ ದನಿ. ಕನ್ನಡ ನಾಡಿನ ಸಂಗೀತಗಾರರಲ್ಲಿ ಮೊದಲಿಗ. ಸಂಗೀತ ಭಾಷೆಯನ್ನು ಮಾತೃಭಾಷೆ ಮಾಡಿಕೊಂಡು ಇಂದಿಗೂ ಮಾತನಾಡುತ್ತಲೇ ಇದ್ದಾರೆ!
ಮೈಸೂರು ಮಹಾರಾಜ ಕಾಲೇಜಿನಿಂದ ಕಲಾ ಪದವಿ ಪಡೆದಿರುವ ಶ್ರೀಕಂಠನ್‌ ನಡೆದ ಹಾದಿಯಲ್ಲಿ ಹಲವು ಗುರುತುಗಳಿವೆ. ಆಕಾಶವಾಣಿಯಲ್ಲಿ 32 ವರ್ಷಗಳ ಸೇವೆ ಕನ್ನಡಿಗರ ಎದೆಗೂಡಿನಲ್ಲಿ ಮನೆ ಮಾಡಿದೆ. `ಗಾನವಿಹಾರ' ಕಾರ್ಯಕ್ರಮದಲ್ಲಿ ಸಂಗೀತ ಗುರುವಾಗಿ ಲಕ್ಷಾಂತರ ಕೇಳುಗರಿಗೆ ಸಂಗೀತ ಪಾಠ ಮಾಡಿದ್ದಾರೆ. ಪುರಂದರ ದಾಸರ ಕೃತಿಗಳಿಗೆ ಅವರು ಕೊಟ್ಟ ಸ್ವರೂಪ ಶ್ರೀಕಂಠನ್‌ ನಿರ್ಮಿಸಿದ ಮಹತ್ವದ ಮೈಲುಗಲ್ಲು. ಕೆಸೆಟ್‌ ಮೂಲಕ ಮನೆ ಮನೆ ತಲುಪಿದ್ದಾರೆ. ಪ್ರತಿಷ್ಠಿತ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯಲ್ಲಿ ಸದಸ್ಯರಾಗಿ ಕಾರ್ಯ ಮಾಡಿದ್ದಾರೆ. ಕೇರಳದ ಸರ್ಕಾರಿ ಸಂಗೀತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ..........ಮದ್ರಾಸ್‌ ಸಂಗೀತಗಾರರ ಆರ್ಭಟದ ನಡುವೆ, ಹಿಂದೂಸ್ತಾನಿ ಸಂಗೀತದ ಅಲೆಯಲ್ಲಿ ಈಜಿ ಒಬ್ಬ ಪರಿಪೂರ್ಣ ಸಂಗೀತ ವಿದ್ವನ್ಮಣಿಯಾಗಿ ಹೊರಹೊಮ್ಮಿದ್ದಾರೆ.
ಆರ್‌.ಕೆ. ಶ್ರೀಕಂಠನ್‌ ಹುಟ್ಟಿದ್ದು ಮಕರ ಸಂಕ್ರಾಂತಿಯ ದಿನ. 1920 ಜನವರಿ 14ರಂದು ಹಾಸನ ಜಿಲ್ಲೆಯ ಕಾವೇರಿ ತಟದ ರುದ್ರಪಟ್ಟಣದಲ್ಲಿ ಅವರ ಹುಟ್ಟು. ಇದೇ ಜನವರಿ 20ಕ್ಕೆ ಅವರಿಗೆ ತೊಂಭತ್ತು ತುಂಬಿದವು. ಇದು ಕನ್ನಡಿಗರ ಹೆಮ್ಮೆ. ತೊಂಭತ್ತರ ಹರೆಯದಲ್ಲೂ ಬರೋಬ್ಬರಿ ಮೂರು ಗಂಟೆ ಕಚೇರಿ ಹಾಡಿ ತಣಿಸಬಲ್ಲ ಒಬ್ಬ ಸಂಗೀತಾರಾಧಕ ನಮ್ಮ ನಡುವೆ ಇರುವುದು ಹೆಮ್ಮೆಯೇ ಸರಿ. ಈ ಸಂದರ್ಭದಲ್ಲಿ ಬೆಂಗಳೂರಿನ ಆರ್‌.ಕೆ. ಶ್ರೀಕಂಠನ್‌ ಟ್ರಸ್ಟ್‌ ವಿಶೇಷ ಕಾರ್ಯಕ್ರಮ ಆಚರಿಸಿತು. ವಾರಗಳ ಕಾಲ ಶ್ರೀಕಂಠನ್‌- 90 ಹೆಸರಿನಲ್ಲಿ ಉತ್ಸವ ನಡೆಸಿತು. ಇಡೀ ಜಗತ್ತಿನೆಲ್ಲೆಡೆ ಇರುವ ಕರ್ನಾಟಕ ಶಾಸ್ತ್ರೀಯ ಸಂಗೀತ ರಸಿಕರು ಶ್ರೀಕಂಠನ್‌- 90ಕ್ಕೆ ಸಾಕ್ಷಿಯಾದರು. ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು.
ಮಹಾನುಭಾವ ಪರಂಪರೆ: ಆರ್‌.ಕೆ. ಶ್ರೀಕಂಠನ್‌ ಅವರ ಕುಟುಂಬದಲ್ಲಿ ವೇದ, ಸಂಸ್ಕೃತ, ಸಂಗೀತ, ಸಾಹಿತ್ಯ, ಲಾಲಿತ್ಯಗಳೇ ತುಂಬಿವೆ. ತಂದೆ ಆರ್‌. ಕೃಷ್ಣಶಾಸ್ತ್ರಿಗಳು ಬಹುಶೃತ ವಿದ್ವಾಂಸರು. ಗಮಕಿ, ಹರಿಕತಾ ವಿದ್ವಾಂಸರು ಹಾಗೂ ಕವಿಗಳೂ ಕೂಡ. ಆರ್‌.ಕೆ. ಶ್ರೀಕಂಠನ್‌ ಅವರಿಗೆ ತಂದೆಯೇ ಮೊದಲ ಗುರು. ನಂತರ ಅಣ್ಣ ಆರ್‌.ಕೆ. ವೆಂಕಟರಮಣ ಶಾಸ್ತ್ರೀ ಗುರುವಾದರು. ಅಣ್ಣನ ಆಶ್ರಯದಲ್ಲಿ ಶ್ರೀಕಂಠನ್‌ ಅಪಾರ ಜ್ಞಾನ ಸಂಪಾದನೆ ಮಾಡಿಕೊಂಡರು.
ಆರ್‌.ಕೆ. ಶ್ರೀಕಂಠನ್‌ ತ್ಯಾಗರಾಜರ ಶಿಷ್ಯ ಪರಂಪರೆಯಲ್ಲಿ ಬರುವ ವಿದ್ವಾಂಸರು. ವಾಲಾಜಪೇಟೆ ವೆಂಕಟರಮಣ ಭಾಗವತರು ತ್ಯಾಗರಾಜರ ನೇರ ಶಿಷ್ಯರು. ಮೈಸೂರು ಸದಾಶಿವರಾಯರು ಭಾಗವತರ ಶಿಷ್ಯರು. ರಾಯರ ಶಿಷ್ಯರು ವೀಣೆ ಶೇಷಣ್ಣ ಹಾಗೂ ಸುಬ್ಬಣ್ಣ. ಶೇಷಣ್ಣರಿಗೆ ಶ್ರೀಕಂಠನ್‌ ಅವರ ಅಣ್ಣ ವೆಂಕಟರಮಣ ಶಾಸ್ತ್ರೀ ಶಿಷ್ಯರು. ಅಣ್ಣನ ಶಿಷ್ಯರು ಆರ್‌.ಕೆ. ಶ್ರೀಕಂಠನ್‌. ಅವರ ಮೂಲ ಮೂಲಪುರುಷನಲ್ಲಿಗೇ ಹೋಗಿ ನಿಲ್ಲುತ್ತದೆ.
ನ್ಯೂಟನ್‌ ಮತ್ತು ಶ್ರೀಕಂಠನ್‌: `ನೀವು ಬಹಳ ಸಾಧಿಸಿದ್ದೀರಿ' ಎಂದು ಯಾರಾದರೂ ಶ್ರೀಕಂಠನ್‌ ಅವರಿಗೆ ಹೇಳಿದರೆ, ವಿಜ್ಞಾನಿ ಐಸಾಕ್‌ ನ್ಯೂಟನ್‌ ಹೇಳಿದ ಮಾತು ಹೇಳಿ ಚಕಿತಗೊಳಿಸುತ್ತಾರೆ. `ನಾನೊಬ್ಬ ಪುಟ್ಟ ಮಗು. ವಿಜ್ಞಾನ ಸಾಗರದ ದಂಡೆಯಲ್ಲಿ ಕಲ್ಲುಗಳನ್ನು ಆಯ್ದುಕೊಂಡು ಆಟವಾಡುತ್ತಿದ್ದೇನೆ' ನ್ಯೂಟನ್ನನ ಈ ಮಾತು ನನಗೂ ಅನ್ವಯಿಸುತ್ತದೆ. ಸಂಗೀತದಿಂದ ದೊಡ್ಡವರು ಮಳೆ ತರಿಸಿದ್ದಾರೆ. ಸುರಿಯುವ ಮಳೆಯನ್ನು ತಡೆದು ನಿಲ್ಲಿಸಿದ್ದಾರೆ. ಕಗ್ಗಲ್ಲನ್ನು ಕರಗಿಸಿದ್ದಾರೆ. ನಾನೊಬ್ಬ ಪಾಮರ! ಇಂಥಾ ಮಹಾಕಾರ್ಯವನ್ನು ಮಾಡಬಲ್ಲೆನೆ ಎಂದು ಪ್ರಶ್ನಿಸುತ್ತಾ ಶ್ರೀಕಂಠನ್‌ ಧರೆಗಿಳಿದುಬಿಡುತ್ತಾರೆ.
ಪುರಂದರ ದಾಸರ ಕೃತಿಗಳಿಗೆ ಶ್ರೀಕಂಠನ್‌ ಸ್ವರೂಪ: ಕರ್ನಾಟಕ ಶಾಸ್ತ್ರೀಯ ಸಂಗೀತ ಪಿತಾಮಹ ಪುರಂದರ ದಾಸರ ಸಂಗೀತ ಬರೀ ಸಂಗೀತವಲ್ಲ. ಗುಣಾಕಾರ, ಭಾಗಾಕಾರಗಳ ಸ್ವರ ಸಂಯೋಜನೆಯಲ್ಲ. ಅದೊಂದು ಮೌಲ್ಯ. ಆ ಮೌಲ್ಯವನ್ನು ಅರ್ಥ ಮಾಡಿಕೊಂಡವರು ಆರ್‌.ಕೆ. ಶ್ರೀಕಂಠನ್‌.
ಮಹಮದೀಯರ ದಾಳಿಯಿಂದ ಇಕ್ಕಟ್ಟಿಗೆ ಸಿಲುಕಿದ್ದ ಭಾರತೀಯ ಸನಾತನ ಧರ್ಮದ ಉಳಿವಿಗೆ ಪುರಂದರ ದಾಸರು ಸಾಮಾಜಿಕ ಬದಲಾವಣೆಯ ಅಸ್ತ್ರವಾಗಿ ಸರಳ ಸಂಗೀತವನ್ನು ಬಳಸಿದ್ದರು. ಇದು ಸಾಹಿತ್ಯ ಮನೋಧರ್ಮ ಸಂಗೀತವಾಗಿತ್ತು. ಇದನ್ನು ಅರ್ಥಮಾಡಿಕೊಂಡ ಶ್ರೀಕಂಠನ್‌ ಪುರಂದರ ದಾಸರ ನೂರಾರು ಕೀರ್ತನೆ, ದೇವರ ನಾಮಗಳಿಗೆ ಮಟ್ಟು ಹಾಕಿದ್ದಾರೆ. ಸ್ಕ್ರಿಪ್ಟ್‌ ಇಲ್ಲದ, ಕೇವಲ ಕರ್ಣ ಪರಂಪರೆಯಿಂದ ಬಂದ ಕೃತಿಗಳಿಗೆ ಅಂತಿಮ ರೂಪ ಕೊಟ್ಟಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಪುರಂದರ ದಾಸರ ಕೃತಿಗಳನ್ನೇ ಇಟ್ಟುಕೊಂಡು ಹಲವು ಕಚೇರಿ ಮಾಡಿದ್ದಾರೆ. `ನಾರಾಯಣ ನಿನ್ನ ನಾಮದ ಸ್ಮರಣೆಯ' ಈ ದೇವರ ನಾಮವನ್ನು ಶ್ರೀಕಂಠನ್‌ ದನಿಯಲ್ಲೇ ಕೇಳಿದರೆ ಚೆನ್ನ!
ಪ್ರದರ್ಶಕ ಮತ್ತು ಗುರು: ಶ್ರೀಕಂಠನ್‌ ಕೇವಲ ಕಚೇರಿ ಕೊಡುವ ಕಲಾವಿದ ಮಾತ್ರವಲ್ಲ. ಅವರೊಬ್ಬ ಶ್ರೇಷ್ಠ ಸಂಗೀತ ಗುರು. ನಿತ್ಯ ಕಚೇರಿಗಳಿಂದ ಮಿಂಚುವ ಕಾಲದಲ್ಲೂ, ಬೇಡಿಕೆಯ ಕಾಲದಲ್ಲೂ, ವಿದೇಶಗಳಿಗೆ ಹೋದಾಗಲೂ ಅವರು ವಿದ್ಯಾದಾನ ಮರೆತಿಲ್ಲ. ಪಾಠ ಮಾಡಿ ತಾವು ಗಟ್ಟಿಯಾಗಿದ್ದಾರೆ. ನೂರಾರು ವಿದ್ಯಾರ್ಥಿಗಳನ್ನು ಬೆಳೆಸಿದ್ದಾರೆ. ಈ ಸಾಧನೆ ಅವರ ಅಳಿಸಲಾಗದ ಗುರುತು. ಇದಕ್ಕೆ ಎಂ.ಎಸ್‌. ಶೀಲಾ, ಟಿ.ಎಸ್‌. ಸತ್ಯವತಿ ಹಾಗೂ ತಮ್ಮ ಮಗ ಆರ್‌.ಎಸ್‌. ರಮಾಕಾಂತ್‌ ಅವರೇ ಸಾಕ್ಷಿ.
ಸಂಕಿರಣಗಳಲ್ಲಿ ಶ್ರೀಕಂಠನ್‌: ಸಂಗೀತ ವಿಚಾರ ಸಂಕಿರಣಗಳಲ್ಲಿ, ಕಾರ್ಯಾಗಾರಗಳಲ್ಲಿ ಆರ್‌.ಕೆ. ಶ್ರೀಕಂಠನ್‌ ಇದ್ದಾರೆ ಎಂದರೆ ಜನ ತುಂಬಿ ಬರುತ್ತಾರೆ. ಅಷ್ಟರ ಮಟ್ಟಿನ ಮೌಲ್ಯ ಅವರ ಮಾತಿನಲ್ಲಿರುತ್ತದೆ. ಎಲ್ಲವನ್ನೂ ಶಾಸ್ತ್ರಬದ್ಧವಾಗಿ, ಸಾಕ್ಷ್ಯ ಸಮೇತವಾಗಿ, ಉದಾಹರಣೆಗಳ ಜತೆಯಾಗಿ ಉಣಬಡಿಸುತ್ತಾರೆ. ವಿಚಾರ ಮಂಡನೆ ಕಬ್ಬಿನ ಜಲ್ಲೆಯನ್ನು ಅರೆದು, ಬಸಿದು ಸಿಹಿಹಾಲು ಕೊಡುವ ರೀತಿಯಲ್ಲಿ ಇರುತ್ತದೆ.
ಸಂಗೀತ ಚಿಕಿತ್ಸಕ: ಸಂಗೀತಕ್ಕೆ ಅತೀಂದ್ರಿಯ ಶಕ್ತಿ ಇದೆ ಎಂಬುದನ್ನು ಶ್ರೀಕಂಠನ್‌ ಬಲವಾಗಿ ನಂಬುತ್ತಾರೆ. ಸುಸ್ವರ ಆಲಿಸಿದ ಖಗ ಮೃಗ ಪಕ್ಷಿಗಳು ತಲೆದೂಗುತ್ತವೆ ಎಂದರೆ ರೋಗ ವಾಸಿ ಮಾಡುವ ಗುಣ ಸಂಗೀತಕ್ಕಿದೆ. ಬಹಳ ಸರಳವಾಗಿ ಲಯವಿನ್ಯಾಸದ ಸಂಗೀತಕ್ಕೆ ರೋಗ ಗುಣಪಡಿಸುವ ಶಕ್ತಿ ಇದೆ ಎಂದು ಶ್ರೀಕಂಠನ್‌ ಸದಾ ಹೇಳುತ್ತಾರೆ.
ತಮ್ಮ 14ನೇ ವಯಸ್ಸಿನಲ್ಲಿ ವೇದಿಕೆ ಹತ್ತಿದ ಶ್ರೀಕಂಠನ್‌ ಇವತ್ತಿಗೂ ದಣಿದಿಲ್ಲ. ಹಲವು ಘಟ್ಟಗಳನ್ನು ಮುಟ್ಟಿ ಬಂದಿದ್ದಾರೆ. ಹೊಗಳಿಕೆಗೆ ಹಿಗ್ಗಿಲ್ಲ. ತೆಗಳಿಕೆಗೆ ಕುಗ್ಗಿಲ್ಲ. ಶಾಂತಮೂರ್ತಿಯಾಗಿ ತಮ್ಮ ಸ್ವರಸಾಗರದಿಂದ ವಿಶ್ವವನ್ನು ಗೆದ್ದಿದ್ದಾರೆ. ಸೌಂಧರ್ಯದ ಅನುಭೂತಿ ಮಾಡಿಕೊಂಡಿದ್ದಾರೆ. ಪ್ರಶಸ್ತಿ, ಮನ್ನಣೆಗಳನ್ನೂ ಮೀರಿ ಎತ್ತರಕ್ಕೆ ತಲುಪಿದ್ದಾರೆ. ತೋಂಭತ್ತು ಪೂರೈಸಿ ನೂರರ ಎಡೆಗೆ ಹೆಜ್ಜೆ ಇಟ್ಟಿದ್ದಾರೆ. ಇಂತಹ ಮಡಿಮಂತ ಕಲಾವಿದನಿಗೆ `ಪದ್ಮ' ಪ್ರಶಸ್ತಿ ಒಂದು ಲೆಕ್ಕವಾಗಿತ್ತೆ?
*****
ತೊಂಭತ್ತು ತುಂಬಿದ ಹೊತ್ತಿನಲ್ಲಿ ಆರ್‌.ಕೆ. ಶ್ರೀಕಂಠನ್‌ ಅವರ ಜೊತೆ ಮಾತುಕತೆ.


* ತಾವು ತೊಂಭತ್ತರ ಎತ್ತರದಲ್ಲಿದ್ದೀರಿ. ಎಂಭತ್ತನ್ನು ಸಂಗೀತಕ್ಕೇ ಧಾರೆ ಎರೆದ್ದೀರಿ. ಈ ಸನ್ನಿವೇಶದಲ್ಲಿ ನಿಮ್ಮ ಮಾತು?



ನನ್ನ ಮನಸ್ಸು ತುಂಬಿ ಬಂದಿದೆ. ಇಷ್ಟು ಕಾಲ ಸೇವೆ ಮಾಡಲು ಅನುವು ಮಾಡಿಕೊಟ್ಟ ಭಗವಂತನಿಗೆ ನನ್ನ ಕೋಟಿ ಪ್ರಣಾಮಗಳು. ಸಂಗೀತ ಸಿದ್ಧಿಯಾಗಿದೆ ಎನ್ನುವ ಧೈರ್ಯ ನನಗಿಲ್ಲ. ಹಾಡುತ್ತಿದ್ದರೆ ಕೇಳುಗ ಅಲ್ಲೇ ತನ್ಮಯನಾಗಿಬಿಡಬೇಕು. ಹಾಗಿರಬೇಕು ಹಾಡುಗಾರಿಕೆ. ಇನ್ನೂ ಹಾಡುವ ಶಕ್ತಿ ಕೊಡು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.


* ಒಂದು ಯುಗಮಾನಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಇದ್ದೀರಿ. ಅಪಾರ ಏರಿಳಿತಗಳನ್ನು ಕಂಡಿದ್ದೀರಿ. ನೀವು ಗುರುತಿಸುವ ಬದಲಾವಣೆಗಳಾವವು?



ಬನ್ನಿ ನೂರು ವರ್ಷ ಹಿಂದೆ ಹೋಗೋಣ. ಅವತ್ತಿನ ಸಾಮಾಜಿಕ ಸ್ಥಿತಿಯೇ ಬೇರೆಯಾಗಿತ್ತು. ಸಂಗೀತ ತಪಸ್ಸಾಗಿತ್ತು. ಗುರುಕುಲ ಪದ್ಧತಿ ಇತ್ತು. ಗುರುಸೇವೆ ಸಂಕಲ್ಪವಾಗಿತ್ತು. ಅಭ್ಯಾಸ ಹಠಯೋಗವಾಗಿತ್ತು. ಕಚೇರಿಗಳು ಬಹಳ ಕಮ್ಮಿ ಇರುತ್ತಿದ್ದವು. ಕಚೇರಿ ಇದೆ ಅಂದರೆ ನೂರಾರು ಮೈಲಿ ಹೋಗಿ ಕೇಳುತ್ತಿದ್ದರು. ಇವತ್ತೆಲ್ಲಿದೆ ಸ್ವಾಮಿ ಆ ಪರಮಭಕ್ತಿ? ಕಚೇರಿ ಆರುವರೆ ಗಂಟೆಗೆ ಆರಂಭವಾದರೆ ಒಂಭತ್ತು ಗಂಟೆಗೆ ಮುಗಿಸಿಬಿಡಬೇಕು. ಯಾಕಂದರೆ ಬೆಳಿಗ್ಗೆ ಎದ್ದು ಆಫೀಸ್‌ಗೆ ಹೋಗಬೇಕಲ್ಲ. ಅಂದು ನಾಲ್ಕುಗಂಟೆ ಕಾಲ ಹಾಡುತ್ತಿದ್ದರು. ಇಂದು ಹಲವು ಸ್ಥರದಲ್ಲಿ ಬದಲಾವಣೆಗಳಾಗಿವೆ. ಬದಲಾಗಬೇಕು ನಿಜ. ಆದರೆ ಅದು ಶಾಸ್ತ್ರವನ್ನು ಮೀರಬಾರದು.


* ನಿಮ್ಮ ಸಂಗೀತ ಜ್ಞಾನ ನಿಮ್ಮನ್ನು ಇಡೀ ದೇಶ ಸುತ್ತಿಸಿದೆ. ಸಾಗರವನ್ನೂ ಧಾಟಿಸಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಅಲೆ ಯಾವ ರೀತಿ ಇದೆ?


ಹಿಂದುಸ್ತಾನಿ ಸಂಗೀತದ ಅಲೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ನಲುಗಿದೆ. ಹಿಂದುಸ್ತಾನಿಯವರಿಗೆ ಸಿಕ್ಕುವ ಮಾನ್ಯತೆ ನಮ್ಮ ಕಲಾವಿದರಿಗೆ ಸಿಗುತ್ತಿಲ್ಲ. ನಮ್ಮ ಸರ್ಕಾರಗಳು ಭಕ್ತಿ ಸಂಗೀತವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇಲ್ಲೇ ನೋಡಿ, ಕರ್ನಾಟಕದಲ್ಲಿ ಸ್ಥಾಪನೆ ಆಗುತ್ತಿರುವ ಸಂಗೀತ ವಿಶ್ವವಿದ್ಯಾಲಯಕ್ಕೆ ಹಿಂದೂಸ್ತಾನಿ ಗಾಯಕಗೊಬ್ಬರ ಹೆಸರನ್ನು ಇಡುವ ಅಗತ್ಯವೇನಿದೆ? ಕರ್ನಾಟಕ ಸಂಗೀತಗಾರರ ಹೆಸರನ್ನೇ ಇಡಬಹುದಲ್ಲಾ? ಇದನ್ನೆಲ್ಲಾ ಯೋಚಿಸಿದರೆ ಬಹಳ ನೋವಾಗುತ್ತೆ.


* ನಿತ್ಯ ಕಚೇರಿಗಳನ್ನು ಮಾಡುತ್ತಲೇ ನೀವೊಬ್ಬ ಶ್ರೇಷ್ಠ ಗುರುವಾಗಿ ವಿಶೇಷ ಎನಿಸಿಕೊಂಡಿದ್ದೀರಿ. ಇದು ಹೇಗೆ ಸಾಧ್ಯವಾಯಿತು?



ಅದಕ್ಕೆ ನನ್ನ ಜ್ಞಾನದಾಹವೇ ಕಾರಣ. ಹೇಳಿಕೊಟ್ಟು ಕಲಿತಿದ್ದೇನೆ. ಪುರಂದರದಾಸರೇ ಹೇಳಿದ್ದಾರಲ್ಲವೇ? ಕೆರೆಯ ನೀರನು ಕೆರೆಗೆ ಚೆಲ್ಲು ಎಂದು. ಕಲಿತಿದ್ದನ್ನು ಹಂಚಿಕೊಂಡಿದ್ದೇನಷ್ಟೆ.
* ಇವತ್ತಿಗೂ ಮೂರುಗಂಟೆ ಕಚೇರಿಯನ್ನು ದಣಿಯದೆ ಹಾಡಿ ತಣಿಸುತ್ತೀರಿ. ನಿಮ್ಮ ದೇಹ ಮತ್ತು ದನಿಯ ಸಂಬಂಧವೇನು?



ರೆಸ್ಪೆಕ್ಟ್‌ ಯುವರ್‌ ಬಾಡಿ. ವರ್‌ಷಿಪ್‌ ಯುವರ್‌ ಬಾಡಿ. ಇದೇ ನನ್ನ ಪಾಲಿಸಿ. ದೇಹ ಮನಸ್ಸು ಶಾಂತವಾಗಿ ಇಟ್ಟುಕೊಂಡಿದ್ದೇನೆ. ಯಾವುದೇ ಉದ್ವೇಗ ಇಲ್ಲ. ಹೊಟ್ಟೇಕಿಚ್ಚು ಇಲ್ಲ. ದುಷ್ಟ ಪ್ರವೃತ್ತಿಗಳು ದೂರಾ ದೂರಾ. ಸಕಾರಾತ್ಮಕ ಯೋಚನೆಗಳ ಜೊತೆ ಜೀವಿಸಿದರೆ ಎಲ್ಲಾ ಚೆನ್ನಾಗಿರುತ್ತೆ.
* ಇವತ್ತಿನ ಕೆಲ ಸಂಗೀತಗಾರರು ಕೃತಿ ರಚನೆಯಲ್ಲಿ ತೊಡಗಿದ್ದಾರೆ. ತಮಗೂ ಕೃತಿ ರಚಿಸುವ ಯೋಚನೆ ಇದಿಯೇ?



ಅವರು ಮೂರ್ಖರು. ಕೃತಿಕಾರ ಅಂದರೆ ಏನು ಅಂದುಕೊಂಡಿದ್ದಾರೆ? ರಿಷಿ ಸದೃಶನಾಗಿರಬೇಕು. ವೈರಾಗ್ಯ ಶಿಖಾಮಣಿ ಆಗಿರಬೇಕು. ಮೌಲ್ಯಗಳನ್ನು ಬದುಕಿನ ಜೊತೆ ಅಳವಡಿಸಿಕೊಂಡಿರಬೇಕು. ಇವರಿಗೆ ಇದೆಲ್ಲಾ ಎಲ್ಲಿಂದ ಬರಬೇಕು. ದೊಡ್ಡವರು ಮಾಡಿರುವುದನ್ನು ಮೊದಲು ಕಲಿತುಕೊಳ್ಳಲಿ ಇವರು. ಮಹಾನುಭಾವರು ಮಾಡಿರುವುದನ್ನು ನಾನಿನ್ನು ಕಲಿಯುತ್ತಲೇ ಇದ್ದೇನೆ. ಇನ್ನು ಕೃತಿ ಮಾಡುವ ಮಾತೆಲ್ಲಿ?


* ಈಗಿನವರಲ್ಲಿ ಸಂಗೀತ ಕಲಿಕೆಯನ್ನು ಯಾವ ರೀತಿಯಲ್ಲಿ ಅರ್ಥೈಸುತ್ತೀರಿ?



ಪ್ರತಿಭಾವಂತ ಮಕ್ಕಳಿದ್ದಾರೆ. ದನಿ ಶುಶ್ರಾವ್ಯವಾಗಿದೆ. ಆದರೆ ವೃತ್ತಿಪರವಾದ ಕಲಿಕೆಯ ಕ್ರಮ ಇಲ್ಲ. ಸಂಗೀತ ಒಂದು ಹವ್ಯಾಸವಾಗಿಬಿಟ್ಟಿದೆ. ವ್ಯವಹಾರಕ್ಕಾಗಿ ಸಂಗೀತವನ್ನು ಬಳಸುತಿದ್ದಾರೆ. ಇದು ಬದಲಾಗಬೇಕು. ಒಳ್ಳೆಯ ಗುರುವಿನ ಮಾರ್ಗದರ್ಶನ, ಹೆಚ್ಚು ಕೇಳ್ಮೆ, ಸಂಗೀತ ಚಿಂತನೆ, ಭಕ್ತಿ ಇದ್ದರೆ ಖಂಡಿತಾ ಮಹತ್ವವನ್ನು ಸಾಧಿಸಬಹುದು.

ಓ ನನ್ನ ಚೇತನ!



ಓ ನನ್ನ ಚೇತನ!



ಅವರು ಕಾಲಿಗೆ ಗಾಲಿ ಕಟ್ಟಿ­ಕೊಂ­ಡ­ವರು. ಗಾಲಿಯ ಗತಿ­ಯೊ­ಡನೆ ಗರ­ಗ­ರನೆ ಗಿರಕಿ ಹೊಡೆ­ಯು­ವ­ವರು. ಗಾಳಿಯ ವೇಗಕ್ಕೆ ಗಾಲಿ­ಯನ್ನು ಗಿರಿ­ಗ­ಟ್ಟಲೆ ಮಾಡ­ಬ­ಲ್ಲರು. ಬುಗು­ರಿ­ಯಂತೆ ತಿರು ತಿರುಗಿ ತಿರು­ಗಿ­ಸ­ಬ­ಲ್ಲರು. ಲಯದ ಹಾದಿ­ಯಲ್ಲಿ ಗಾಲಿ­ಯನ್ನು ನಡೆ­ಸ­ಬ­ಲ್ಲರು. ತಾಳಕ್ಕೆ ತಕ್ಕಂತೆ ಕುಣಿದು ತಣಿ­ಸ­ಬ­ಲ್ಲರು. ಹಾರ­ಬ­ಲ್ಲರು. ಏರ­ಬ­ಲ್ಲರು.....!
ಅವರು ಅಂಗ­ವಿ­ಕಲ ಕಲಾ­ವಿ­ದರು. ಆದರೆ ಅವರ ಮನ­ಸ್ಸಿ­ನಲ್ಲಿ ವೈಕ­ಲ್ಯತೆ ಇಲ್ಲ. ಅವರ ಮನ­ಸ್ಸಿ­ನಲ್ಲಿ ಆಕಾ­ಶ­ವಿದೆ. ಎತ್ತ­ರಕ್ಕೆ ಹಾರುವ ತಪಸ್ಸು ನಿತ್ಯವೂ ನಡೆ­ದಿದೆ. ಭರತ ನಾಟ್ಯ, ಕಥ­ಕ್ಕಳಿ, ಕುಚು­ಪುಡಿ, ಸಮ­ರ­ಕಲೆ ಮುಂತಾದ ಅದ್ಭುತ ಕಲಾ ಪ್ರಕಾ­ರ­ಗ­ಳನ್ನು ತಮ್ಮದೇ ವಿನ್ಯಾ­ಸದ `ಗಾ­ಲಿ­ಕುರ್ಚಿ ನೃತ್ಯ'ದ ಮೂಲಕ ಅನಾ­ವ­ರ­ಣ­ಗೊ­ಳಿಸಿ ಇಡೀ ಜಗ­ತ್ತನ್ನು ಬೆರ­ಗು­ಗೊ­ಳಿ­ಸಿ­ದ್ದಾರೆ. ಅವರ ಅಂತ­ರಂಗ ಬಹಳ ಸೂಕ್ಷ್ಮ­ಗ್ರಾಹಿ. ಸುಂದ­ರ­ತೆ­ಯನ್ನು ಗ್ರಹಿಸಿ ತನ್ನ ದೇಹಕ್ಕೆ ತಂದು­ಕೊ­ಳ್ಳು­ವಲ್ಲಿ ಅವರು ನಿಷ್ಣಾ­ತರು.
ಅವರ ಶಕ್ತಿ ಇಡೀ ಜಗ­ತ್ತಿ­ನಾ­ದ್ಯಂತ ಅನಾ­ವ­ರ­ಣ­ಗೊಂ­ಡಿದೆ. ಬರೋ­ಬ್ಬರಿ 10 ಸಾವಿರ ದಾಖಲೆ ಪ್ರದ­ರ್ಶನ ನೀಡಿ ಲಿಮ್ಕಾ ವಿಶ್ವ­ದಾ­ಖಲೆ ಪುಸ್ತ­ಕ­ದಲ್ಲಿ ಸ್ಥಾನ ಪಡೆ­ದಿ­ದ್ದಾರೆ. ತಮ್ಮ ಅಂಗ­ವಿ­ಕ­ಲ­ತೆ­ಯನ್ನು ಒಂದು ಶಾಪ ಎಂದು ಪರಿ­ಗ­ಣಿ­ಸದ ಈ ಕಲಾ­ಕು­ಡಿ­ಗಳು ವಿಶ್ವ­ಚೇ­ತ­ನ­ಗ­ಳಾಗಿ ಹೊರ ಹೊಮ್ಮಿ­ದ್ದಾರೆ.
ಎಬಿ­ಲಿಟಿ ಅನ್‌­ಲಿ­ಮಿ­ಟೆಡ್‌: ಈ ಕಲಾ­ವಿ­ದರ ಕನ­ಸು­ಗ­ಳಿಗೆ ಎಲ್ಲೆ ಎಂಬು­ದಿಲ್ಲ. ಅವರ ಸಂಸ್ಥೆಯ ಹೆಸ­ರಿ­ನಲ್ಲೇ ಒಂದು ಸುಂದರ ಸೆಳೆ­ತ­ವಿದೆ. ಅದು `ಎ­ಬಿ­ಲಿಟಿ ಅನ್‌­ಲಿ­ಮಿ­ಟೆಡ್‌'(ಅ­ನಿ­ಯ­ಮಿತ ಸಾಮರ್ಥ್ಯ). ಆ ಚೇತ­ನ­ಗಳ ಮನಸ್ಸು ಬಹಳ ವಿಶಾಲ. ಮನ­ಸ್ಸಿ­ನಲ್ಲಿ ಸಲ್ಲದ ಯಾವ ವಿಚಾ­ರ­ಗ­ಳಿಲ್ಲ. ಅವು ಮುಗ್ಧ ಮನ­ಸ್ಸು­ಗಳು. ಕಲ್ಪ­ನೆ­ಯನ್ನು ಕೃತಿ­ಗಿ­ಳಿ­ಸಿವ ಸಾಮರ್ಥ್ಯ ಅವ­ರದು.
ಈ ವಿಕಲ ಚೇತ­ನರು ಗಾಲಿಯ ಕುರ್ಚಿ ಬಳಸಿ ರಂಗದ ಮೇಲೆ ತಮ್ಮ ಸಮರ ಕಲೆ ಸಾಹಸ ಪ್ರದ­ರ್ಶಿ­ಸು­ತ್ತಾರೆ. ಬೆಳ­ಕಿಗೆ ತಮ್ಮನ್ನು ತಾವು ತೆರೆ­ದು­ಕೊಂಡು ನೋಡು­ಗ­ರನ್ನು ಉಸಿರು ಕಟ್ಟಿ­ಸು­ತ್ತಾರೆ. ಸಂಗೀ­ತಕ್ಕೆ ಸಮ್ಮೋ­ಹ­ಗೊಂಡು ಮಾಧುರ್ಯ ತುಂಬು­ತ್ತಾರೆ. ಸಮ­ರ­ಕ­ಲೆಯ ಅದ್ಭುತ ಸಾಹ­ಸ­ಗ­ಳಿಗೆ ರಂಗದ ಮೇಲೆ ರೂಪ ಕೊಡು­ತ್ತಾರೆ.
ಕನ­ಸಿಗೆ ರೂಪ­ಕೊಟ್ಟ ಶಿಲ್ಪಿ: ಗಾಲಿ­ಕುರ್ಚಿ ನೃತ್ಯ ಎನ್ನುವ ವಿಕಲ ಚೇತ­ನರ ವಿಶೇಷ ಕಲಾ ಪ್ರಕಾ­ರಕ್ಕೆ ರೂಪ­ಕೊ­ಟ್ಟ­ವರು ಭರ­ತ­ನಾಟ್ಯ ಕಲಾ­ವಿದ ಸಯ್ಯದ್‌ ಸಲ್ಲಾ­ವು­ದ್ದೀನ್‌ ಪಾಶಾ. ಇವರೇ ಎಬಿ­ಲಿಟಿ ಅನ್‌­ಲಿ­ಮಿ­ಟೆಡ್‌ ಸಂಸ್ಥಾ­ಪ­ಕರು. ಚೇತ­ನರ ಬಾಯಲ್ಲಿ ಇವರು ಗುರೂಜಿ. ಸಯ್ಸದ್‌ ಮುಸ್ಲಿಂ ಸಮು­ದಾ­ಯಕ್ಕೆ ಸೇರಿ­ದ­ವ­ರಾ­ದರೂ ಇವರ ಹೃದಯ ಬಾಲ್ಯ­ದಿಂ­ದಲೂ ಭರ­ತ­ನಾ­ಟ್ಯ­ದತ್ತ ಮಿಡಿ­ಯು­ತ್ತಿತ್ತು. ಮನೆ­ಯ­ವರ ವಿರೋ­ಧದ ನಡು­ವೆಯೂ ನಾಟ್ಯ­ರಾ­ಣಿ­ಯನ್ನು ಕಣ್ಣಿಗೆ ಕಟ್ಟಿ­ಕೊಂ­ಡರು. ವರ್ಷಾ­ನು­ಗ­ಟ್ಟಲೆ ಮಾಡದ ತಪ­ಸ್ಸಿನ ಫಲ­ವಾಗಿ ನಾಟ್ಯ­ರಾಣಿ ಒಲಿದು ಬಂದಳು. ದೆಹ­ಲಿ­ಯನ್ನು ಕಾರ್ಯ­ಸ್ಥಾನ ಮಾಡಿ­ಕೊಂಡ ಸಯ್ಯದ್‌ ತಮ್ಮ ವಿಲ­ಕ­ಚೇ­ತನ ಗಾಲಿ­ಕುರ್ಚಿ ಕಲ್ಪ­ನೆಗೆ ರೂಪ ಕೊಡುತ್ತಾ ಸಾಗಿ­ದರು.
ದೆಹಲಿ ಸುತ್ತ­ಮು­ತ್ತ­ಲಿನ ಸರ್ಕಾರಿ ಶಾಲೆ­ಗ­ಳ­ಲ್ಲಿದ್ದ ಬಡ ಅಂಗ­ವಿ­ಕಲ ಮಕ್ಕ­ಳನ್ನು ಆಯ್ದು­ಕೊಂಡು ಅವ­ರಿ­ಗೊಂದು ಹೊಸ ಬದು­ಕಿನ ಕನಸು ತುಂಬಿ­ದರು. ಅವ­ರಿಗೆ ವಸತಿ, ಊಟ ಸಹಿತ ನೃತ್ಯ ತರ­ಬೇತಿ ನೀಡಿ­ದರು. ಹತ್ತಾರು ವರ್ಷ­ಗಳ ಕಾಲ ತರ­ಬೇತಿ ಪಡೆದ ಈ ಮಕ್ಕಳು ಚೇತ­ನ­ಗ­ಳಾಗಿ ಹೊರ­ಹೊ­ಮ್ಮಿ­ದರು. ಈಗ 150 ಚೇತ­ನರು ಈ ತಂಡ­ದ­ಲ್ಲಿ­ದ್ದಾರೆ. ಕೆಲ ಕಲಾ­ವಿ­ದರು ಸ್ವಂತ­ವಾಗಿ ಬೆಳೆದು ನಿಂತಿ­ದ್ದಾರೆ. ಬಾಲಿ­ವು­ಡ್‌­ನಲ್ಲೂ ತಮ್ಮ ಪ್ರತಿಭೆ ಮೆರೆ­ದಿ­ದ್ದಾರೆ. ಕಲಾ­ನಿ­ರ್ದೇ­ಶ­ಕರು, ಸಹಾ­ಯಕ ನಿರ್ದೇ­ಶ­ಕ­ರಾಗಿ ಕೆಲಸ ಮಾಡು­ತ್ತಿ­ದ್ದಾರೆ.
ಸಯ್ಯದ್‌ ಸಲ್ಲಾ­ವು­ದ್ದೀನ್‌ ಪಾಶಾ ಕರ್ನಾ­ಟ­ಕ­ದ­ವರೇ. ಬೆಂಗ­ಳೂರು ಗ್ರಾಮಂ­ತರ ಜಿಲ್ಲೆಯ ಆನೆ­ಕಲ್‌ ಅವರ ಹುಟ್ಟೂರು. ತಮ್ಮ ನೃತ್ಯ ಬದುಕು ಆರಂಭ ಆದ ಮೇಲೆ ದೆಹ­ಲಿ­ಯಲ್ಲಿ ನೆಲ­ಸಿ­ದ್ದಾರೆ.
ವಿಶೇಷ ಗಾಲಿ­ಗಳು: ಗಾಲಿ­ಕುರ್ಚಿ ನೃತ್ಯ ಮಾಡುವ ವಿಕ­ಲಾಂಗ ಮಕ್ಕ­ಳಿ­ಗಾಗಿ ವಿಶೇಷ ಕುರ್ಚಿ­ಗ­ಳನ್ನು ವಿನ್ಯಾಸ ಮಾಡ­ಲಾ­ಗಿದೆ. ಭಾರ­ವಿ­ಲ್ಲದ, ಗಾಳಿ ತುಂಬಿದ ಚಕ್ರ­ವುಳ್ಳ ಕುರ್ಚಿ­ಗ­ಳನ್ನು ಅವ­ರಿ­ಗಾಗಿ ತಯಾರು ಮಾಡ­ಲಾ­ಗಿದೆ.
ಬೆಂಗ­ಳೂ­ರಿ­ನಲ್ಲಿ ಗಾಲಿ­ಕುರ್ಚಿ ನೃತ್ಯ: ಈಗ ಬೆಂಗ­ಳೂ­ರಿ­ಗ­ರಿಗೆ ಸುಯೋಗ. ಜಗ­ತ್ಪ್ರ­ಸಿದ್ಧ ಗಾಲಿ­ಕುರ್ಚಿ ನೃತ್ಯ­ವನ್ನು ಸವಿ­ಯುವ ಒಂದು ಅಪೂರ್ವ ಅವ­ಕಾಶ. ೨೮-೦೬-2010ರಂದು ಸಂಜೆ 6. 30ಕ್ಕೆ ಚೌಡಯ್ಯ ಸ್ಮಾರಕ ಭವ­ನ­ದಲ್ಲಿ ನೃತ್ಯ ಕಾರ್ಯ­ಕ್ರಮ ಆಯೋ­ಜ­ನೆ­ಗೊಂ­ಡಿದೆ. ನಗ­ರದ ನ್ಯಾಷ­ನಲ್‌ ಇನ್ಸ್‌­ಟಿ­ಟ್ಯೂಟ್‌ ಆಪ್‌ ಪರ್ಸ­ನಲ್‌ ಮ್ಯಾನೇ­ಜ್‌­ಮೆಂಟ್‌ ಸುವರ್ಣ ಮಹೋ­ತ್ಸ­ವದ ಅಂಗ­ವಾಗಿ ಕಾರ್ಯ­ಕ್ರ­ಮ­ಕೊ­ಡಲು ಎಬಿ­ಲಿಟಿ ಅನ್‌­ಲಿ­ಮಿ­ಟೆಡ್‌ ತಂಡ ಆಗ­ಮಿ­ಸು­ತ್ತಿದೆ. ಮೈ ನವಿ­ರೇ­ಳಿ­ಸುವ ಮಣಿ­ಪುರ ಸಮರ ಕಲೆ ಬೆಂಗ­ಳೂ­ರಿನ ಗಾಲಿ­ನೃ­ತ್ಯ­ದಲ್ಲಿ ಮುಖ್ಯ ಪಾತ್ರ ವಹಿ­ಸ­ಲಿದೆ. ಅದೇ ರೀತಿ ರಾಮಾ­ಯಣ, ಮಹಾ­ಭಾ­ರತ ಕತೆ­ಗಳು ಗಾಲಿ­ಕುರ್ಚಿ ನೃತ್ಯ­ದಲ್ಲಿ ತೆರೆ­ದು­ಕೊ­ಳ್ಳ­ಲಿವೆ. ಈ ಕಾರ್ಯ­ಕ್ರ­ಮ­ದಲ್ಲಿ 17 ಜನ ವೃತ್ತಿ ವಿಕಲ ಚೇತ­ನರು ಭಾಗ­ವ­ಹಿ­ಸು­ತ್ತಿ­ದ್ದಾರೆ. ಈ ಸುಂದರ ಸಾಹಸ ಮಯ ನೃತ್ಯ ಕಾರ್ಯ­ಕ್ರ­ಮ­ವನ್ನು ಶುಕ್ರ­ವಾರ ಬೆಂಗ­ಳೂರು ಮಂದಿ ಸಾಕ್ಷೀ­ಕ­ರಿ­ಸ­ಬ­ಹುದು. ಹೆಚ್ಚಿನ ವಿವ­ರ­ಗ­ಳಿ­ಗಾಗಿ ಮೊಬೈಲ್‌: 9686715886 ಸಂಪ­ರ್ಕಿ­ಸ­ಬ­ಹುದು.