


ಸಿಂಫಲ್ ನೀತಾ, ಸೈಲೆಂಟ್ ಮುಖೇಶ್!
ಅದು ಮುಂಬೈ ಮಹಾನಗರದ ಪೆಡ್ಡರ್ ರೋಡು. ಮುಂಜಾನೆ ಎಂಟು ಗಂಟೆ. ಪೀಕ್ ಅವರ್. ಗಿಜಿಗಿಜಿ ಬಿಜಿ. ಮುಂದೆ ನಿಧಾನವಾಗಿ ಸಾಗುತ್ತಿದ್ದ ಅಂಬಾಸಿಡರ್ ಕಾರು. ಹಿಂದಿನ ಸೀಟಿನಲ್ಲಿ ಸುಂದರ ಹುಡುಗಿ. ಅಂಬಾಸಿಡರ್ ಕಾರಿನ ಹಿಂದೆ ಆ ಹುಡುಗಿಯಷ್ಟೇ ಸುಂದರವಾಗಿದ್ದ ಫಿಯಟ್ ಕಾರು. ಪೆಡ್ಡರ್ ರಸ್ತೆಯ ಮೇನ್ ಸಿಗ್ನಲ್. ಸ್ಟಾಪ್ ಕೊಟ್ಟ ಅಂಬಾಸಿಡರ್. ಅದರಿಂದೆ ಫಿಯಟ್ ಕೂಡ ಫುಲ್ಸ್ಟಾಪ್...ತಕ್ಷಣ ಫಿಯಟ್ನಿಂದ ಕೆಳಗಿಳಿದು ಬಂದ ಗುಂಡು ದೇಹದ, ಮುದ್ದು ಮೊಗದ ಕಟ್ಟುಮಸ್ತು ಹುಡುಗ ಅಂಬಾಸಿಡರ್ ಹಿಂದಿನ ಸೀಟಿನ ಹುಡುಗಿಗೆ ಗ್ಲಾಸ್ ಓಪನ್ ಮಾಡುವಂತೆ ಸನ್ನೆ ಮಾಡಿದ. ಆಕೆ ತೆಗೆದಳು. ಹಿಂದೆ ಮುಂದೆ ನೋಡದೆ ‘ಐ ಲವ್ ಯೂ’ ಅಂದ. ಹುಡುಗಿ ತಡಬಡಾಯಿಸಿದಳು. ಮತ್ತೆ ಜೋರಾಗಿ ‘ಐ ಲವ್ ಯೂ’ ಅಂದ. ಅಕ್ಕ ಪಕ್ಕದವರಿಗೆಲ್ಲಾ ಕುತೂಹಲ. ಸಿಗ್ನಲ್ ಹಸಿರು ತೋರಿತು. ಈ ಗುಂಡ ಅಲ್ಲಾಡಲಿಲ್ಲ. ಹಿಂದೆ ಹಾರ್ನ್ ಮೊರೆತ ಕಿವಿಗಡುಚಿದವು. ‘ಐ ಲವ್ ಅನ್ನದಿದ್ದರೆ ಗಾಡಿ ತೆಗೆಯೊಲ್ಲ’ ಅಂತ ತಾಕೀತೂ ಬೇರೆ. ಅವಳಿಗೆ ಏನೂ ತೋಚಲಿಲ್ಲ. ಅಷ್ಟರಲ್ಲಿ ಬಂದ ಪೊಲೀಸು ಅವನಿಗೆ ಎರಡು ತದುಕಿದ. ಎಳೆದು ಕಾರಿನಲ್ಲಿ ಕೂರಿಸಿ ಗಾಡಿ ತೆಗೆಸಿ ರೋಡ್ ಕ್ಲಿಯರ್ ಮಾಡಿದ!
ಆ ಗುಂಡು ಹುಡುಗ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಿದವನು. ಆದರೆ ಅವಳು ಮುಂಬೈನ ಸಾಮಾನ್ಯ ಕುಟುಂಬದ ಹೆಣ್ಣುಮಗಳು. ಕೋಟಿನೊಳಗೇ ಅವನ ಕನಸು, ವಿಮಾನದಲ್ಲೇ ಅವನ ವಿಶ್ರಾಂತಿ. ಆದರೆ ಬಾಂದ್ರಾದ ನೃತ್ಯ ಶಾಲೆಯಲ್ಲಿ ಅವಳ ಬಣ್ಣದ ಕನಸು, ನಟರಾಜನ ಮುಂದೆ ಹಠಯೋಗವೇ ಅವಳ ವಿಶ್ರಾಂತಿ. ಸ್ಟಾರ್ ಹೊಟೇಲ್ಗಳಲ್ಲಿ ಅವನ ಖಾನಾ ಸೋನಾ, ಆದರೆ ನೃತ್ಯವೇ ಅವಳ ಊಟ ನಿದ್ದೆ.....ಅವನು ಮುಖೇಶ್ ಧೀರೂಬಾಯ್ ಅಂಬಾನಿ, ಅವಳು ನೀತಾ ಮುಖೇಶ್ ಅಂಬಾನಿ!
ಜಗತ್ತಿನ ಸೂಪರ್ ಶ್ರೀಮಂತ ಮನುಷ್ಯನ ಹಿಂದೆ ಇಂಥದ್ದೊಂದು ಫ್ಯಾಸಿನೇಟಿಂಗ್ ಸ್ಟೋರಿಯಿದೆ. ಅಂಬಾನಿ ಕುಟುಂಬದ ಹುಡುಗನೊಬ್ಬ ಮಿಡ್ಲ್ ಕ್ಲಾಸ್ ಹುಡುಗಿಯನ್ನು ಮೆಚ್ಚಿದ್ದ. ಬಿಸಿನೆಸ್ ವರ್ಲ್ಡ್ ಬೆಚ್ಚಿ ಬಿದ್ದಿತ್ತು. ಸಿಲ್ಲಿ ಥಿಂಕಿಂಗ್ ಅಂದವರು ಅದೆಷ್ಟು ಮಂದಿಯೋ. ಆದರೆ ಮುಖೇಶ್ ಅಂಬಾನಿ ಎಲ್ಲಾ ಶ್ರೀಮಂತರಂತಿರಲಿಲ್ಲ. ಸಹೋದರ ಅನಿಲ್ ಅಂಬಾನಿ ಹಾಗೆ ಹೈ ಫೈ ಹುಂಬನೂ ಆಗಿರಲಿಲ್ಲ. ಅವನೊಳಗಿದ್ದ ಮೌನ ದೇವತೆ ಅವನನ್ನು ಸರಳತೆಯ ಸಾಕಾರ ಮೂರ್ತಿಯನ್ನಾಗಿ ಮಾಡಿತ್ತು. ಅಂತದೇ ಸರಳ ಸೌಂದರ್ಯ ಹುಡುಗಿಯನ್ನು ಮನಸಾರೆ ಮೆಚ್ಚಿಕೊಂಡಿದ್ದ.
ಮುಖೇಶ್ ನೀತಾಳನ್ನು ಹುಚ್ಚನಂತೆ ಹಚ್ಚಿಕೊಂಡಿದ್ದ. ಅವಳ ನೃತ್ಯ ರೂಪಕಗಳನ್ನು ಒಂದೂ ಬಿಡದೆ ನೋಡುತ್ತಿದ್ದ. ಅವಳೆಲ್ಲೇ ಹೋದರೂ ಅವಳ ಹಿಂದೆ ತೆರಳುತ್ತಿದ್ದ. ಒಂದು ದಿನ ನೀತಾಳ ಮನೆಗೆ ಒಂದು ಪೋನ್ ಕಾಲ್ ಬಂತು. ಆ ಕಡೆಯಿಂದ ‘ನಾನಮ್ಮ, ಧೀರೂಬಾಯ್ ಅಂಬಾನಿ ಮಾತನಾಡುತ್ತಿದ್ದೇನೆ’ ಎಂದು ಕೇಳಿ ಬಂದಾಗ ನೀತಾ ‘ರಾಂಗ್ನಂಬರ್’ ಅಂತ ಪೋನ್ ಕುಕ್ಕಿದ್ದಳು. ಅಂಬಾನಿಗಳಂಥಾ ಶ್ರಿಮಂತರಿಗೆ ನಮ್ಮ ಜೊತೆ ಏನು ಕೆಲಸ ಇರುತ್ತೆ ಅಂತ ಅವಳಿಗನ್ನಿಸಿತ್ತು. ಪಾಪ, ನೀತಾಳಿಗೆ ಮುಖೇಶ್, ಅಂಬಾನಿ ಕುಟುಂಬದವ ಅಂತಲೂ ಗೊತ್ತಿರಲಿಲ್ಲ!
ಇನ್ನೊಂದು ದಿನ ನೀತಾಳ ಮನೆಗೆ ಸ್ವತಃ ಧೀರೂಬಾಯ್ ಅಂಬಾನಿಯೇ ಬಂದರು. ಮಗಳನ್ನು ಕೊಡುವಂತೆ ನೀತಾ ಪೋಷಕರ ಮುಂದೆ ಧೀರೂಬಾಯ್ ಸಾಮಾನ್ಯರಂತೆ ಕೇಳಿಕೊಂಡರು. ಬಿಸಿನೆಸ್ಮಂದಿ ಬದುಕಲ್ಲೂ ಬಿಸಿನೆಸ್ ಮಾಡುತ್ತಾರೆ ಎಂಬ ಭಯ ನೀತಾಳ ಮನೆ ಮಂದಿಯನ್ನು ಕಾಡದೆ ಬಿಡಲಿಲ್ಲ. ಆದರೆ ಧೀರೂಬಾಯ್ ನೀತಾಳ ಮನೆಯವರನ್ನು, ಮಗ ಮೆಚ್ಚಿದವಳನ್ನು ಒಪ್ಪಿಸಿ ಮದುವೆ ಶಾಸ್ತ್ರ ಮುಗಿಸಿಯೇ ಬಿಟ್ಟರು. ಈಗ ಅವರ ಸಂಸಾರಕ್ಕೆ ತುಂಬು 25 ವರ್ಷ. ಮೂರು ಮಕ್ಕಳು.
ಮುಖೇಶ್ಗೆ ನೀತಾ ಎಂದರೆ ಸದಾ ಅಚ್ಚುಮೆಚ್ಚು. ನೀತಾ ಅಬಿಪ್ರಾಯ ಕೇಳದೆ ಮುಖೇಶ್ ಯಾವ ಪ್ರಮುಖ ನಿರ್ಧಾರವನ್ನೂ ತೆಗೆದುಕೊಳ್ಳಲ್ವಂತೆ. ಮುಖೇಶ್ನ ಎಲ್ಲಾ ಯಶಸ್ಸಿನ ಹಿಂದೆ ನೀತಾಳ ಛಾಯೆ ಇದ್ದೇ ಇದೆ. ಅವಳೂ ಅಷ್ಟೆ, ಮುಖೇಶ್ ಇಲ್ಲದೆ ಅವಳಿಲ್ಲ. 25ವರ್ಷಗಳ ಹಿಂದಿದ್ದ ಸರಳತೆ ನೀತಾಳಲ್ಲಿ ಇನ್ನೂ ಹಾಗೇ ಇದೆ. ನಟನಾ ಹವ್ಯಾಸ ಇನ್ನೂ ಮುಂದುವರೆಯುತ್ತಲೇ ಇದೆ. ಧೀರೂಬಾಯಿ ಅಂಬಾನಿ ಪೌಂಡೇಷನ್ ಅಡಿಯಲ್ಲಿ ನೀತಾ ಕಟ್ಟಿರುವ ಶಾಲೆಯಲ್ಲಿ ನೀತಾಳೇ ನೃತ್ಯ ಶಿಕ್ಷಕಿ. ‘ದೃಷ್ಟಿ ಪ್ರಾಜೆಕ್ಟ್’ ಕೆಳಗೆ ಲಕ್ಷಾಂತರ ದೃಷ್ಟಿಹೀನರಿಗೆ ನೀತಾ ಕಣ್ಣಾಗಿದ್ದಾರೆ.
‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಾನು ಒಬ್ಬ ಸಿಪಾಯಿ‘ ಅಂತ ಮುಖೇಶ್ ಅಂದರೆ, ‘ ಐ ವಾಸ್ ಕುಕ್ಡ್ ಬೈ ಮುಖೇಶ್, ಹೂಕ್ಡ್ ಬೈ ಮುಖೇಶ್, ಬುಕ್ಡ್ ಬೈ ಮುಖೇಶ್....ಅವರ ಹೆಂಡಿತಿಯಾಗಿದ್ದಕ್ಕೆ ನಾ ಧನ್ಯೋಸ್ಮಿ’ ಅಂತಾಳೆ ನೀತಾ!
ಸೈಕಲ್ ಸವಾರನಿಗೆ ಸೆಲ್ಯೂಟ್!
ಹೊಡೆಯುವವರಿಗೆಲ್ಲಾ ಪ್ರಾನ್ಸಿನ ಲ್ಯಾನ್ಸ್ ಆರ್ಮ್ಸ್ಟ್ರಾಂಗ್ ಅಂದರೆ ಒಂದು ಇನ್ಸ್ಫಿರೇಷನ್. ಅವನು ಸೈಕಲ್ ತುಳಿಯುವಾಗ ಅವನ ಕಣ್ಣುಗಳ ದೃಷ್ಟಿ ನೇರ ಮತ್ತು ದಿಟ್ಟ. ಸೈಕ್ಲಿಂಗ್ನಲ್ಲಿ ಬರೋಬ್ಬರಿ ಏಳು ಬಾರಿ ವಿಶ್ವಪ್ರಸಿದ್ಧ ‘ಟೂರ್ ಡಿ’ ಪ್ರಶಸ್ತಿ ಗೆದ್ದಿರುವ ಲ್ಯಾನ್ಸ್ ಜಗತ್ಪ್ರಸಿದ್ಧ ಸೈಕಲ್ ಸರದಾರ!
ಆಗ ಲ್ಯಾನ್ಸ್ ಉತ್ತುಂಗದಲ್ಲಿದ್ದ. ಅವನು 10 ‘ಟೂರ್ ಡಿ’ಗಳನ್ನು ಮುಡಿಗೇರಿಸಿಕೊಳ್ಳುತ್ತಾನೆ ಎಂಬುದು ಅಭಿಮಾನಿಗಳ ಲೆಕ್ಕಾಚಾರವಾಗಿತ್ತು. ಅವನು ಇದ್ದಕ್ಕಿದ್ದಂತೆ ಒಂದು ದಿನ ಸೈಕಲ್ಗೆ ಸೆಲ್ಯೂಟ್ ಹೊಡೆದು ನಿವೃತ್ತಿ ಘೋಷಣೆ ಮಾಡಿಬಿಟ್ಟ. ಲ್ಯಾನ್ಸ್ ಅದಕ್ಕೆ ಕೊಟ್ಟ ಕಾರಣಕ್ಕೆ ಇಡೀ ಜಗತ್ತು ಬೆರಗಾಯಿತು. 30 ವರ್ಷಗಳ ಕಾಲ ಮನಸ್ಸನ್ನು ಕೊರೆಯುತ್ತಿದ್ದ ಹುಳವನ್ನು ಲ್ಯಾನ್ಸ್ ಒಮ್ಮೆಲೇ ಹೊರಬಿಟ್ಟು ಶಾಕ್ ಕೊಟ್ಟ.
ಲ್ಯಾನ್ಸ್ ಈಗಲೂ ವೃಷಣ ಕ್ಯಾನ್ಸರ್ನಿಂದ ನರಳುತ್ತಿದ್ದಾನೆ. ರೋಗ ಪತ್ತೆಯಾದಾಗ ಅವನು ಒಂದೂ ‘ಟೂರ್ ಡಿ’ ಗಳಿಸಿರಲಿಲ್ಲ. ಅವನು ಒಂದು ಸುತ್ತು ಸೈಕಲ್ ತುಳಿಯುವಷ್ಟರಲ್ಲಿ ಅವರ ಎರಡೂ ವೃಷಣಗಳು ಊದಿಕೊಳ್ಳುತ್ತಿದ್ದವು. ಆ ಯಾತನೆ ವರ್ಣನಾತೀತ. ಬಹಳ ಸೂಕ್ಷ್ಮ ಅಂಗ ಅದು. ಸೈಕಲ್ ಸೀಟಿನ ಏಟು ವೃಷಣಕ್ಕೆ ಬಿದ್ದರೆ ಆತ ಸತ್ತೂ ಹೋಗಬಹುದು. ಗುಪ್ತಾಂಗ ಬೇರೆ, ಯಾರ ಬಳಿಯೂ ಹೇಳಿಕೊಳ್ಳುವ ಹಾಗೂ ಇಲ್ಲ. ಇಂತಹ ವಿಷಮ ಸ್ಥಿತಿಯಲ್ಲೂ ಲ್ಯಾನ್ಸ್ ಅಭ್ಯಾಸ ಮಾಡುತ್ತಿದ್ದ. ಅದ್ಹೇಗೆ ಮಾಡುತ್ತಿದ್ದ ಅಂತ ಆ ದೇವರೇ ಬಲ್ಲ! ಪ್ರತಿ ಸಲ ‘ಟೂರ್ ಡಿ’ ಗೆದ್ದಾಗಲೂ ಲ್ಯಾನ್ಸ್ ಒಂದೊಂದು ಆಪರೇಷನ್ ಮಾಡಿಸಿಕೊಳ್ಳುತ್ತಿದ್ದ. ಮಾಹಾಮಾರಿ ಕ್ಯಾನ್ಸರ್ ಗೆಲ್ಲಲು ಅವನು ಮಾಡಿರದ ಮದ್ದೇ ಇಲ್ಲ. ಚಿಕೆತ್ಸೆಗಾಗಿ ಜಗತ್ತು ಸುತ್ತಿದ್ದಾನೆ.
ಲ್ಯಾನ್ಸ್ ಕ್ಯಾನ್ಸರ್ ಜೊತೆ ಹೋರಾಡುತ್ತಲೇ ಏಳು ‘ಟೂರ್ ಡಿ’ ಗೆದ್ದಿದ್ದಾನೆ. ಅವನನ್ನು ಕ್ಯಾನ್ಸರ್ ಇನ್ನೂ ಕಾಡುತ್ತಲೇ ಇದೆ. ಕಡೆಗೂ ಅವನು ಹೈರಾಣಾಗಿ ನನಗೆ ಟೆಸ್ಟಿಕಲ್ ಕ್ಯಾನ್ಸರ್ ಇದೆ ಅಂತ ಹೇಳಿಕೊಂಡಿದ್ದಾನೆ. ಈಗ ಅವನು ಸೈಕಲ್ ತುಳಿಯಲಾರ. ಕ್ಯಾನ್ಸರ್ ಮೆದುಳಿನವರೆಗೆ ವ್ಯಾಪಿಸಿದೆ. ಸೈಕಲ್ ಓಟ ನಿಲ್ಲಿಸಿದ್ದರೂ, ಅವನು ಕ್ಯಾನ್ಸರ್ ವಿರುದ್ಧದ ಹೋರಾಟ ನಿಲ್ಲಿಸಿಲ್ಲ. ‘ಲಿವ್ ಸ್ಟ್ರಾಂಗ್ ಪೌಂಡೇಷನ್’ ಕಟ್ಟಿಕೊಂಡು ಕ್ಯಾನ್ಸರ್ ರೋಗಿಗಳಲ್ಲಿ ಚೈತನ್ಯ ತುಂಬುತ್ತಿದ್ದಾನೆ.
ಶಹಬ್ಭಾಸ್ ಶರ್ವಾನಿ!
ಅವಳು ಹಗ್ಗದ ಜೊತೆ ಆಟಕ್ಕಿಳಿಯುತ್ತಾಳೆ. ತನ್ನ 5 ಅಡಿ ದೇಹವನ್ನು ಸುರುಳಿ ಸುತ್ತಿಕೊಂಡು ಹಗ್ಗವಾಗಿ ಜಗ್ಗುತ್ತಾಳೆ...ಕಂಬವನ್ನು ಕೈಲಿ ಹಿಡಿದು ಗರಗರ ಗಿರಕಿ ಹೊಡೆಯುತ್ತಾಳೆ. ಕಂಬದೆತ್ತರಕ್ಕೇರುತ್ತಾಳೆ.....ಕತ್ತಿಯನ್ನು ಕೈಯ್ಯಲ್ಲಿ ಹಿಡಿದು ಮುಗಿಲೆತ್ತರಕ್ಕೆ ಹಾರಿ ‘ಕಳರಿ ಪಯಟ್ಟು‘ವನ್ನು ಧರೆಗಿಳಿಸುತ್ತಾಳೆ.....ಮುಖವಾಡ ಧರಿಸಿ ಧಗಧಗನೆ ಉರಿದು ‘ದೇವರ ಕೋಲಾ’ವನ್ನೇ ಮುರಿಯುತ್ತಾಳೆ....ಅವಳಿಡುವ ಹೆಜ್ಜೆಗಳಿಂದ ಭರತನಾಟ್ಯ, ಕಥಕ್ಕಳಿಗಳಿಗೆ ಬಣ್ಣ ತುಂಬುತ್ತಾಳೆ. ಅವಳು ಹಾಕುವ ಅದ್ಭುತ ಆಸನಗಳಿಂದ ‘ಯೋಗ’ರಾಣಿಯಾಗಿ ಮಿಂಚುತ್ತಾಳೆ.....!
ಅವಳು ಖ್ಯಾತ ನರ್ತಕಿ ಇಶಾ ಶರ್ವಾನಿ. ಒಬ್ಬರು ಒಂದು ಕಲೆಯನ್ನು ದಕ್ಕಿಸಿಕೊಂಡು ಜೀರ್ಣಿಸಿಕೊಳ್ಳಲು ಒಂದು ಜನ್ಮವೇ ಸಾಕಾಗುವುದಿಲ್ಲ. ಆದರೆ ಈ ಹುಡುಗಿಗೆ ಐದಾರು ನೃತ್ಯ ಪ್ರಕಾರಗಳು ಅರಸಿ ಬಂದಿವೆ. ಕಳರಿ ಪಯಟ್ಟು, ಬಂಗಾಳದ ಚೌ, ಭರತ ನಾಟ್ಯ, ಕಥಕ್, ಹಗ್ಗದ ನೃತ್ಯ, ಕಂಬ ಕುಣಿತ, ದೇವರ ಕೋಲಾ, ಪೂಜಾ ಕುಣಿತ.......ಅಬ್ಬಬ್ಬಾ ಒಂದು ಹುಡುಗಿ ಇಷ್ಟೆಲ್ಲಾ ಮಾಡಲು ಸಾಧ್ಯವೇ! ಇಶಾ ಬಾಲಿವುಡ್ನಲ್ಲಿ ಬೇಡಿಕೆಯ ನರ್ತಕಿ. ‘ಕಿಸ್ನಾ’ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಬಂದ ಇಶಾ ಹತ್ತಾರು ಚಿತ್ರಗಳಲ್ಲಿ ಅಭಿನಯಿಸಿದ್ದಾಳೆ. ಆದರೆ ಬಾಲಿವುಡ್ ಅವಳ ಕರ್ಮಭೂಮಿಯಲ್ಲ. ಅವಳ ನೃತ್ಯ ಸರಕಿನಲ್ಲಿ ಬರೀ ಹತ್ತು ಪರ್ಸೆಂಟ್ ಕೊಟ್ಟರೂ ಬಾಲಿವುಡ್ನಲ್ಲಿ ಬೆರಗು ಮೂಡುತ್ತದೆ. ಅವಳ ಕರ್ಮಭೂಮಿಯೇನಿದ್ದರೂ ರಂಜಸಜ್ಜಿಕೆಯೇ . ಅಲ್ಲಿ ಅವಳು ಅರಳುತ್ತಾಳೆ, ಮಿನುಗುತ್ತಾಳೆ! ಸದ್ಯಕ್ಕೆ ‘ದಕ್ಷಸೇಥ್ ನೃತ್ಯ ಕಂಪನಿ’ಗಾಗಿ ನೃತ್ಯ ಪ್ರದರ್ಶನ ನೀಡುತ್ತಿರುವ ಇಶಾ ಶರ್ವಾನಿ ತನ್ನದೇ ಸ್ವಂತ ನೃತ್ಯ ಪ್ರಕಾರವನ್ನು ಸಂಶೋಧನೆ ಮಾಡುತ್ತಿದ್ದಾಳೆ.